ಅಂತಾರಾಷ್ಟ್ರೀಯ ಷಡ್ಯಂತ್ರದ ಬಗ್ಗೆ ವಿದ್ಯಾರ್ಥಿಗಳು ಜಾಗರೂಕತೆ ವಹಿಸಬೇಕು: ಎಸ್. ಬಾಲಕೃಷ್ಣ
ಮಂಗಳೂರು: ದೇಶದ ಕೆಲ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಕೌಟುಂಬಿಕ ವ್ಯವಸ್ಥೆ ಹಾಗೂ ಹಿಂದು ಜೀವನ ಪದ್ಧತಿಯನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಕಮ್ಯೂನಿಸ್ಟ್ ಸಿದ್ಧಾಂತ ಪ್ರೇರಿತವಾದ ಈ ಅಂತಾರಾಷ್ಟ್ರೀಯ ಷಡ್ಯಂತ್ರದ ಬಗ್ಗೆ ವಿದ್ಯಾರ್ಥಿಗಳು ಜಾಗರೂಕತೆ ವಹಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಎಸ್. ಬಾಲಕೃಷ್ಣ ಹೇಳಿದರು.
ನಗರದ ಅಳಕೆ ಉಮಾಧಾಮ್ ಸಭಾಂಗಣದಲ್ಲಿ ಶನಿವಾರ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಬಗೆಗಿನ ನಿರೂಪಣೆಯನ್ನು ಬದಲಿಸುವ, ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಕ್ಕೆ ಆದ್ಯತೆ ನೀಡುವ, ದಲಿತ, ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳನ್ನು ಇತರ ವಿದ್ಯಾರ್ಥಿಗಳ ವಿರುದ್ಧ ಎತ್ತಿಕಟ್ಟುವ, ಸ್ವಾತಂತ್ರ್ಯದ ನೆಪದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಒಂದೇ ಹಾಸ್ಟೆಲ್‌ನಲ್ಲಿ ವಾಸ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎನ್ನುವ ಬೇಡಿಕೆ ವಿವಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಷಡ್ಯಂತ್ರ, ಪಿತೂರಿಯ ಒಳಮರ್ಮವನ್ನು ಅರಿತು ವಿದ್ಯಾರ್ಥಿ ಸಮುದಾಯ ಜಾಗೃತಗೊಳ್ಳಬೇಕು ಎಂದು ಅವರು ಹೇಳಿದರು.
ಮೊಗಲರು ಭಾರತಕ್ಕೆ ಖಡ್ಗ ಹಿಡಿದು ಬಂದರೆ, ಬ್ರಿಟಿಷರು ಬಂದೂಕು ಹಿಡಿದು ಆಡಳಿತ ನಡೆಸಿದರು. ಈಗ ಭಾರತ ವಿರೋಧಿಗಳ ಕಾರ್ಯತಂತ್ರ ಬದಲಾಗಿದೆ. ಕಮ್ಯೂನಿಸ್ಟರು, ಇಸ್ಲಾಮಿಕ್ ಮೂಲಭೂತವಾದಿಗಳು ಯುವಜನಾಂಗದ ಮನಸ್ಸಿನ ದಿಕ್ಕು ಬದಲಿಸುವ ಬೆಳವಣಿಗೆಗಳು ನಡೆಯುತ್ತಿವೆ. ಈ ಬಗ್ಗೆ ಯುವ ಸಮೂಹ ಎಚ್ಚರ ವಹಿಸಬೇಕು ಎಂದರು.
ದೇಶದ ಶೇ.65ರಷ್ಟು ಜನರ ಸರಾಸರಿ ವಯಸ್ಸು ೨೮ ವರ್ಷ ಆಗಿದೆ. ಭಾರತ ಈಗ ಯುವ ಸಮೂಹವಿರುವ ಮಾನವ ಸಂಪನ್ಮೂಲ ಒಳಗೊಂಡ ದೇಶ. ದೇಶದ ಅಮೃತ ಕಾಲದಲ್ಲಿ ಭಾರತ ಪ್ರಪಂಚದ ಮೂರನೇ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದೆ. ಆರ್ಥಿಕತೆ, ತಂತ್ರಜ್ಞಾನ, ಮೂಲಸೌಲಭ್ಯ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಲ್ಲಿ ಗಣನೀಯ ಸಾಧನೆಯಾಗಿದೆ. ದೇಶದ ರೈಲು, ವಿಮಾನ ನಿಲ್ದಾಣಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರುತ್ತಿವೆ. ಪರಿಸರ ಸ್ನೇಹಿ ವ್ಯವಸ್ಥೆಗೆ ಭಾರತೀಯರು ಒಗ್ಗಿಕೊಳ್ಳುತ್ತಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಪ್ರಗತಿಯಾಗಿದೆ ಎಂದು ಎಸ್. ಬಾಲಕೃಷ್ಣ ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಹು ಆಯಾಮದ ಚಟುವಟಿಕೆಗಳಿಗೆ ಒತ್ತು ನೀಡಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಅನುಭವಿ ಸಂಘಟನೆಯಾದ ಎಬಿವಿಪಿ ಸಮಾಜದ ಅವಶ್ಯಕತೆಗಳನ್ನು ಪೂರೈಸಲು ಪೂರಕವಾಗಿದೆ. ಎಬಿವಿಪಿ ಸದಸ್ಯರು ಈಗ ಇತರ ದೇಶಗಳ ಜತೆ ರಾಯಭಾರಿಗಳಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡುವುದು ಸಂಘಟನೆಯ ಹೆಗ್ಗಳಿಕೆಯಾಗಿದೆ. ಸಮಾಜ ಪರಿವರ್ತನೆ ಮೂಲಕ ದೇಶವನ್ನು ವಿಶ್ವಗುರುವನ್ನಾಗಿಸುವುದು ಎಬಿವಿಪಿಯ ಗುರಿಯಾಗಿದೆ ಎಂದರು.
ಎಬಿವಿಪಿ ರಾಜ್ಯ ಉಪಾಧ್ಯಕ್ಷ ಅಜಯಕುಮಾರ್, ರಾಜ್ಯ ಕಾರ್ಯದರ್ಶಿ ಪ್ರವೀಣ್‌ಕುಮಾರ್, ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಉಪಸ್ಥಿತರಿದ್ದರು.
ಬಳಿಕ ವಿವಿಧ ವಿಷಯಗಳ ಬಗ್ಗೆ ಚರ್ಚೆ, ಉಪನ್ಯಾಸ ನಡೆಯಿತು. ಸೆ.೨೨ರಂದು ಕಾರ್ಯಕಾರಿಣಿ ಸಮಾರೋಪಗೊಳ್ಳಲಿದೆ.