ಕೊರಗ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ಡಾ. ಪ್ರತಿಭಾ ಆರ್. ಕರೆ
ಶಿರ್ವ: ಕೊರಗ ಸಮುದಾಯ ತೀರಾ ಹಿಂದುಳಿದ ಸಮುದಾಯವಾಗಿದ್ದು ಮಹಿಳೆಯರು ಮತ್ತು ಮಕ್ಕಳ ಸಬಲೀಕರಣ ಶಿಕ್ಷಣದಿಂದ ಮಾತ್ರ ಸಾಧ್ಯ. ಸಮುದಾಯದ ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣವನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು. ಅಬಲೆಯರಾಗದೆ ಸಬಲೆಯರಾಗಿ ಅವಕಾಶವನ್ನು ಪಡೆದುಕೊಳ್ಳುವಲ್ಲಿ ಸಫಲರಾಗಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್. ಕರೆಯಿತ್ತರು.
ಅವರು ಶನಿವಾರ ಶಿರ್ವ ಸಮೀಪದ ಪೆರ್ನಾಲ್ ಸಮಗ್ರ ಗ್ರಾಮೀಣ ಆಶ್ರಮದಲ್ಲಿ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ) ಕರ್ನಾಟಕ-ಕೇರಳ ಮತ್ತು ನ್ಯಾಯಕೂಟ ಇವರ ಆಶ್ರಯದಲ್ಲಿ ಆಯೋಜಿಸಿದ ‘ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳ ಕುರಿತು ಸಬಲೀಕರಣ ತರಬೇತಿ’ ಕಾರ್ಯಕ್ರಮವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಹೆಣ್ಣು ಹುಟ್ಟಿನಿಂದ ಕಷ್ಟಕರ ಜೀವನವನ್ನು ನಡೆಸಿ ಹೆಣ್ತನವನ್ನು ಅನುಭವಿಸಿಕೊಂಡು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದರು.
ನ್ಯಾಯಕೂಟದ ಅಧ್ಯಕ್ಷ ಬಾಲರಾಜ್ ಕೋಡಿಕಲ್ ಮಾತನಾಡಿ, ತಮ್ಮ ಸಮುದಾಯದಲ್ಲಿ ಹೆಣ್ಣುಮಕ್ಕಳ ಪ್ರಾಮುಖ್ಯತೆಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡು, ಮಾತೃಮೂಲ ಪರಂಪರೆಯ ಮೌಲ್ಯವನ್ನು ಎತ್ತಿ ಹಿಡಿಯುವಂತಹ ಕಾರ್ಯ ಮಾಡಬೇಕು. ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಅವಕಾಶಗಳನ್ನು ಹೆಚ್ಚಿಸಿ ಅವರ ಜೊತೆ ನಾವೂ ಬೆಳೆಯಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಕೀಲರು ಹಾಗೂ ಸಹಾಯಕ ಕಾನೂನು ನೆರವು ಅಭಿರಕ್ಷಕರಾದ ಶ್ರೀನಿವಾಸ ಉಪಾಧ್ಯ ಬಿ. ಮಾತನಾಡಿ, ಪೋಕ್ಸೋ ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯಿದೆಯ ಬಗ್ಗೆ ವಿವರಿಸಿದರು. ಲೈಂಗಿಕ ಹಾಗೂ ಕೌಟುಂಬಿಕ ದೌರ್ಜನ್ಯ, ಒಳ್ಳೆಯ ಮತ್ತು ಕೆಟ್ಟ ಸ್ಪರ್ಶ ಇವುಗಳ ವಿವರಿಸಿದರು.
ಹಿರಿಯಶ್ರೇಣಿ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇದರ ಸದಸ್ಯ ಹಾಗೂ ಕಾರ್ಯದರ್ಶಿ ಪುರುಶೋತ್ತಮ್ ಮಾತನಾಡಿ, ವಿವಿಧ ದೌರ್ಜನ್ಯಗಳ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ಕಾಯಿದೆ, ಮಕ್ಕಳ ಸಹಾಯವಾಣಿ ಬಳಕೆ ಬಗ್ಗೆ ವಿವರಿಸಿದರು. ಸಮುದಾಯ ಕಾರ್ಯಕರ್ತರಾದ ಶಶಿಕಲಾ ಮಣಿಗೇರಿ ಬಾಲಕಾರ್ಮಿಕ ನಿಷೇಧ ಕಾಯಿದೆ ಬಗ್ಗೆ ತಿಳಿದರು.
ಧ್ಯೇಯಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ವಿಮಲಾ ಕಳ್ತೂರು ನಿರೂಪಿಸಿದರು. ದಿವಾಕರ್ ಕಳ್ತೂರು ವಂದಿಸಿದರು.