ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಮಂಗಳೂರಿನ ಅಪೂರ್ವ ಶೆಟ್ಟಿ
ಮಂಗಳೂರು: ಸೋನಿ ಟಿವಿಯಲ್ಲಿ ಪ್ರಸಾರಗೊಳ್ಳುವ ಕೌನ್ ಬನೇಗಾ ಕರೋಡ್‌ಪತಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಳೆದ ವರ್ಷ 0.03 ಸೆಕೆಂಡ್‌ನ ಅಂತರಿಂದ ಹಾಟ್ ಸೀಟ್ ತಪ್ಪಿತ್ತು.
ಮರಳಿ ಯತ್ನವ ನಡೆಸಿದ ಕಾರಣ ಈ ವರ್ಷ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ನನ್ನ ತಂದೆಯ ಕನಸನ್ನು ನನಸು ಮಾಡಿಸಿದಂತಾಗಿದೆ.
ಇದು ಮಂಗಳೂರಿನ ಪಂಪ್‌ವೆಲ್‌ನ ನಿವಾಸಿ ಅಪೂರ್ವ ಶೆಟ್ಟಿಯ ಮಾತು. ಕೌನ್ ಬನೇಗಾ ಕರೋಡ್‌ಪತಿ ಸ್ಪರ್ಧೆಯಲ್ಲಿ ಭಾಗವಹಿಸಿ 11 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿರುವ ಅಪೂರ್ವ ಶೆಟ್ಟಿಯ ಸ್ಪರ್ಧೆಯ ಪ್ರಸಾರ ಸೆ.27 ರಂದು ರಾತ್ರಿ 9 ಗಂಟೆಗೆ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.
ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹಾಟ್ ಸೀಟ್ನ ತಮ್ಮ ಅನುಭವ ಹಂಚಿಕೊಂಡ ಅಪೂರ್ವ ಶೆಟ್ಟಿ, 2022 ರಿಂದ ಸತತವಾಗಿ ಕೆಬಿಸಿಯಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಿದ್ದೆ. ಕಳೆದ ವರ್ಷ ಹಾಟ್ ಸೀಟ್‌ನಲ್ಲಿ ಕೂದಲೆಳೆಯ ಅಂತರದಿಂದ ವಂಚಿತಗೊಂಡ ಹಿನ್ನೆಲೆಯಲ್ಲಿ ಈ ಬಾರಿಯೂ ಹಾಟ್ ಸೀಟ್‌ಗಾಗಿನ ಜಲ್ದಿ 5 ಬಜಲ್ ರೌಂಡ್ಸ್‌ನಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಂತೂ ಕೊನೆಗೂ ಅವಕಾಶ ದೊರಕಿ 11 ಸರಿ ಪ್ರಶ್ನೆಗಳಿಗೆ ಉತ್ತರ ನೀಡಿರುವುದು ಖುಷಿ ನೀಡಿದೆ ಎಂದು ಹೇಳಿದರು.
ಬಿಕಾಂ ಪದವೀಧರೆಯಾಗಿರುವ ಅಪೂರ್ವ ಶೆಟ್ಟಿ, ಯುಪಿಎಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಅಪೂರ್ವ ಅವರ ತಂದೆ ಲೋಕನಾಥ ಶೆಟ್ಟಿ, ಸಹೋದರಿ ಅನನ್ಯ ಶೆಟ್ಟಿ ಇದ್ದರು.