ಎರಡು ದಿನ ಕುದ್ರೋಳಿಯಲ್ಲಿ ಎಬಿವಿಪಿ ಪ್ರಾಂತ ಕಾರ್ಯಕಾರಿಣಿ

ಎರಡು ದಿನ ಕುದ್ರೋಳಿಯಲ್ಲಿ ಎಬಿವಿಪಿ ಪ್ರಾಂತ ಕಾರ್ಯಕಾರಿಣಿ

ಮಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ, ಪ್ರಾಂತ ಕಾರ್ಯಕಾರಿಣಿ ಕುದ್ರೋಳಿಯ ಉಮಾಧಂ ಸಭಾಭವನದಲ್ಲಿ ಸೆ.21 ಮತ್ತು 22ರಂದು ನಡೆಯಲಿದೆ ಎಂದು ರಾಜ್ಯ ಘಟಕದ ಕಾರ್ಯದರ್ಶಿ ಪ್ರವೀಣ್ ಎಚ್.ಕೆ. ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.21ರಂದು ಪೂರ್ವಾಹ್ನ 11 ಗಂಟೆಗೆ ಕಾರ್ಯಕಾರಿಣಿ ಉದ್ಘಾಟನೆಗೊಳ್ಳಲಿದೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಭಾಗವಹಿಸುವರು ಎಂದರು.

ಕಾರ್ಯಕಾರಿಣಿಯಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ, ವರ್ತಮಾನದ ಆಗುಹೋಗುಗಳ ಬಗ್ಗೆ ಎರಡು ಕರಡು ನಿರ್ಣಯಗಳನ್ನು ಮಂಡಿಸಿ, ಅಂಗೀಕರಿಸಲಾಗುತ್ತದೆ. ರಾಜ್ಯದ ಎಲ್ಲ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗೆ ಏಕರೂಪದ ವೇಳಾಪಟ್ಟಿ, ಯುಯುಸಿಎಂಎಸ್ ತಂತ್ರಾಂಶದ ಸಮರ್ಪಕ ಕಾರ್ಯನಿರ್ವಹಣೆ, ಗೊಂದಲ ಪರಿಹಾರ, ಕೆಪಿಎಸ್‌ಸಿ, ಕೆಇಎ ನಡೆಸುವ ಪರೀಕ್ಷೆಗಳಲ್ಲಿ ಪಾರದರ್ಶಕತೆ, ವಿದ್ಯಾರ್ಥಿ ವೇತನ ಸಮರ್ಪಕ ವಿತರಣೆ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿರ್ಣಯ ಮಂಡಿಸಲಾಗುವುದು ಎಂದರು.

ವರ್ತಮಾನದ ಪರಿಸ್ಥಿತಿಗೆ ಸಂಬಂಧಿಸಿ ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ ಸಮರ್ಪಕ ತನಿಖೆ, ಕಾನೂನು ಸುವ್ಯವಸ್ಥೆಯ ಸಮರ್ಪಕ ನಿರ್ವಹಣೆ, ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ, ಗುಡ್ಡ ಕುಸಿತ, ಗಣಿಗಾರಿಕೆಯಿಂದ ಆಗುವ ದುಷ್ಪರಿಣಾಮ ತಡೆಗೆ ಆಗ್ರಹಿಸಿ ಕರಡು ಮಂಡಿಸಲಾಗುವುದು ಎಂದು ತಿಳಿಸಿದರು.

‘ಜಾಗತಿಕ ರಾಜಕಾರಣದಲ್ಲಿ ಭಾರತದ ಪಾತ್ರ’ ಈ ಕುರಿತು ತುಮಕೂರು ವಿಶ್ವವಿದ್ಯಾಲಯದ ಸಾಮಾಜಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುರೇಶ್ ಉಪನ್ಯಾಸ ನೀಡುವರು. ಕಾರ್ಯಕಾರಿಣಿಯಲ್ಲಿ ಸಂಘಟನೆಯ ಪ್ರಮುಖರು ಭಾಗವಹಿಸುವರು.

ಸುದ್ದಿಗೋಷ್ಠಿಯಲ್ಲಿ ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ಮಂದಾರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article