ಎಲ್ಲಾ ಅಕ್ರಮಗಳ ಬಗ್ಗೆ ಸುಪ್ರಿಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಬೇಕು: ಬಿ.ಕೆ. ಹರಿಪ್ರಸಾದ್
ಮಂಗಳೂರು: ಕಾಂಗ್ರೆಸ್ ಪಕ್ಷ 70 ವರ್ಷದಲ್ಲಿ ಏನು ಮಾಡಿದೆ ಎಂಬುದು ಜನಸಾಮಾನ್ಯರಿಗೆ ಗೊತ್ತಿದೆ. 10 ವರ್ಷದಲ್ಲಿ ಬಿಜೆಪಿ ಏನು ಮಾಡಿದೆ ಎಂದು ಹೇಳಲು ಅವರಿಗೆ ಸಾಧ್ಯವಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಅವರು ಇಂದು ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿಯವರು ನಿರಂತರವಾಗಿ ಕಳೆದ 70 ವರ್ಷದಲ್ಲಿ ಕಾಂಗ್ರೆಸ್‌ನವರು ಏನು ಮಾಡಿದ್ದಾರೆ? ಅಂತ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ನಾವು 70 ವರ್ಷದಲ್ಲಿ ಸಂಪಾದನೆ ಮಾಡಿದ್ದನ್ನು ಈಗ ಬಿಜೆಪಿಯವರು ಮಾರಿದ್ದಾರೆ ಎಂದರು.
ರಾಜ್ಯಪಾಲರು ಈಗ ಏನು ಅರ್ಕಾವತಿ ವರದಿ ಕೇಳಿದ್ದಾರೆ ಇದೊಂದು ಅವರಿಗೆ ರೋಗ. ಅಕ್ರಮವನ್ನು ಸಕ್ರಮ ಮಾಡುವಂತಹ ಒಂದು ಪದಪುಂಜ ಬಂದುಬಿಟ್ಟಿದೆ. ಅಕ್ರಮವನ್ನು ಸಕ್ರಮ ಮಾಡಿರುವುದನ್ನು ನೋಡಿದ್ದೇವೆ. ಅದ್ದರಿಂದ ಇದಕ್ಕೆ ಕೇವಲ ಯಾರಾದರೂ ವಿಚಾರಣೆ ಮಾಡಿದ್ರೆ ಸಾಲುವುದಿಲ್ಲ ಕಳೆದ 25 ವರ್ಷದಲ್ಲಿ ಏನೇನು ಅಕ್ರಮಗಳಾಗಿದೆ ಅನ್ನುವುದನ್ನು ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕು ಆಗ ಯಾವುದೇ ಪಕ್ಷದವರಿರಲಿ ಎಲ್ಲವೂ ಹೊರಗೆ ಬರುತ್ತದೆ. ಯಾರ್ಯಾರು ಎಷ್ಟೆಷ್ಟು ಸತ್ಯ ಹರಿಶ್ಚಂದ್ರರು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಹಳೆ ಸರ್ಕಾರದಲ್ಲಿ ಏನೇನು ನಡೆದಿದೆ ಎಂಬುದನ್ನು ಬಿಜೆಪಿ ಕೆದಕಿಕೊಂಡು ಬರುತ್ತಿದ್ದಾರೆ, ಬೊಫೋರ್ಸ್ ಕೇಸ್ ಎಂದು ಅದನ್ನೇ ಕಳೆದ 30 ವರ್ಷಗಳಿಂದ ಹೇಳಿಕೊಂಡು ಬಂದರು ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೆಲವು ಅಕ್ರಮಗಳನ್ನು ಸಕ್ರಮ ಮಾಡಿಕೊಂಡು ಬಂದಿರುವುದು ಸ್ಪಷ್ಟವಾಗಿದೆ. ಯಾವುದೇ ಸರ್ಕಾರ ಇರಲಿ ನಮ್ಮದೇ ಸರ್ಕಾರವಿರಲಿ ಅಥವಾ ಅವರದೇ ಸರ್ಕಾರವಿರಲಿ ಕೂಲಂಕುಶ ತನಿಖೆಯಾಗಲು ಸುಪ್ರೀಂ ಕೋರ್ಟ್ ಜಡ್ಜ್ ಒಬ್ಬರನ್ನು ನೇಮಕ ಮಾಡಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮುನಿರತ್ನ ಅವರ ಪ್ರಕರಣ ಇದೊಂದು ದ್ವೇಷ ರಾಜಕಾರಣ ಎಂಬುದು ಬದಿಗಿರಲಿ, ನರೇಂದ್ರ ಮೋದಿ ಅವರಿಂದ ಇವೆಲ್ಲ ಸಾಂಕ್ರಾಮಿಕ ರೋಗದ ತರಹ ಬಂದಿರುವುದು. ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ಸಂಜಯ್ ಜೋಷಿ ಎಂಬವರ ಸಿಡಿ ಮಾಡಿಸಿದ್ದರು. ಅಲ್ಲಿಂದ ಇದೊಂದು ಸಾಂಕ್ರಾಮಿಕ ರೋಗವಾಗಿ ಹರಡಿಕೊಂಡು ಬಂದಿದೆ. ಸಂಜಯ್ ಜೋಷಿ ಅವರನ್ನು ನರೇಂದ್ರ ಮೋದಿ ರಾಜಕೀಯವಾಗಿ ನಿವೃತ್ತಿ ಮಾಡಿಸಿಬಿಟ್ಟರು.
ಈಗ ಆ ರೋಗ ಇಡೀ ದೇಶಕ್ಕೆ ಹರಡಿಕೊಂಡು ಬಿಟ್ಟಿದೆ. ಎಲ್ಲಾ ರೀತಿಯಲ್ಲೂ ರಾಜಕಾರಣ ತಿಳಿಯಾಗಬೇಕಾದರೆ, ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆದರೆ ಎಷ್ಟು ಅಕ್ರಮಗಳಾಗಿದ್ದಾವೆ, ಎಷ್ಟು ಸಕ್ರಮಗಳಾಗಿದ್ದಾವೆ ಗೊತ್ತಾಗುತ್ತದೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.