ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಿದ ಕೇಂದ್ರ ಸರಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆ
ಮಂಗಳೂರು: ಬಿಜೆಪಿ ನೇತ್ರತ್ವದ ಎನ್‌ಡಿಎ ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕೂಡಲೇ ಹಿಂಪಡೆಯುವಂತೆ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಮಂಗಳೂರಿನ ಕ್ಲಾಕ್ ಟವರ್ ಬಳಿಯಲ್ಲಿ ಜೆಸಿಟಿಯು ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು.
ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶಭರಿತವಾಗಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ, ಕೈಗಾರಿಕಾ ಸಂಬಂಧ ಕಾಯ್ದೆಯು ಕಾರ್ಮಿಕ ಸಂಘಗಳ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿದೆ.ವಾರ್ಷಿಕ ರಿಟರ್ನ್ಸ್ ಸಲ್ಲಿಸುವಲ್ಲಿ ಕಾರ್ಮಿಕ ಸಂಘಗಳು ವಿಳಂಬ ಮಾಡಿದರೆ ಸಂಘದ ನೋಂದಣಿಯನ್ನು ರದ್ದು ಅಥವಾ ಭಾರೀ ದಂಡ ವಿಧಿಸುವ ಮೂಲಕ ಸಂಘಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ಕಾರ್ಮಿಕ ವಿರೋಧಿಯಾದ ೪ ಸಂಹಿತೆಗಳ ವಿಚಾರಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ಅವರು ಈ ಸಂಹಿತೆಯು ಅಂತರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲು ಅನುಮತಿ ನೀಡಿದೆ. ವೇತನ ಕಾಯಿದೆಯು ಕನಿಷ್ಠ ಚೇತನ ಪರಿಕಲ್ಪನೆಯನ್ನೇ ದುರ್ಬಲಗೊಳಿಸುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ನಾಯಕ ವಸಂತ ಆಚಾರಿ, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಜ್ಯ ನಾಯಕ ಸುರೇಶ್ ಹೆಗ್ಡೆ, ಬ್ಯಾಂಕ್ ನೌಕರರ ಸಂಘಟನೆಯ ರಾಜ್ಯ ನಾಯಕ ಕೆ. ಫಣೀಂದ್ರ, ಎಐಟಿಯುಸಿ ಜಿಲ್ಲಾ ನಾಯಕ ಸುರೇಶ್ ಕುಮಾರ್ ಮಾತನಾಡಿ, ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿವರಿಸುತ್ತಾ ಕಾರ್ಪೊರೇಟ್ ಕಂಪನಿಗಳ ಹಿತ ಕಾಯುವ ಸರಕಾರದ ವಿರುದ್ಧ ಪ್ರಬಲ ಜನಾಂದೋಲನ ಬೆಳೆದು ಬರಬೇಕೆಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ನಾಯಕರಾದ ಸುಕುಮಾರ್ ತೊಕ್ಕೋಟ್ಟು, ಜಯಂತ ನಾಯಕ್, ನೋಣಯ್ಯ ಗೌಡ, ಬಿ.ಕೆ. ಇನ್ತಿಯಾಜ್, ಚಂದ್ರಹಾಸ, ರಾಧಾ ಮೂಡಬಿದ್ರೆ, ಲೋಲಾಕ್ಷಿ, ಸುಂದರ ಕುಂಪಲ, ಭಾರತಿ ಬೋಳಾರ, ಜಯಲಕ್ಷ್ಮಿ, ರೋಹಿದಾಸ್, ವಿಲಾಸಿನಿ, ಕೃಷ್ಣಪ್ಪ, ಲಕ್ಷ್ಮೀ, ಎಐಟಿಯುಸಿ ಜಿಲ್ಲಾ ನಾಯಕ ಬಿ ಶೇಖರ್, ವಿ. ಕರುಣಾಕರ್, ಪುಷ್ಪಾರಾಜ್ ಬೋಳೂರು, ಪ್ರವೀಣ್ ಕುಮಾರ್, ಸುಲೋಚನಾ, ಕುಸುಮ, ರೈತ ನಾಯಕರಾದ ಸದಾಶಿವದಾಸ್, ಯುವಜನ ಮುಖಂಡರಾದ ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.


