ಕಾಂಗ್ರೆಸ್ ಸಂವಿಧಾನ ವಿರೋಧಿ ಸರ್ಕಾರ: ರಾಜ್‌ಗೋಪಾಲ್ ರೈ
ಮಂಗಳೂರು: ಸಿಬಿಐ ಸ್ವಯಂ ಪ್ರೇರಿತ ತನಿಖೆ ನಡೆಸಬಹುದೆಂಬ ಅಧಿಕಾರವನ್ನು ರದ್ದು ಮಾಡುವ ಸಂಪುಟದ ನಿರ್ಣಯದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿಯಾಗಿ ವರ್ತಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ರಾಜ್‌ಗೋಪಾಲ್ ರೈ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
ಶುಕ್ರವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸೇರಿದಂತೆ ವಿವಿಧ ಹಗರಣಗಳ ಭಯದಿಂದಲೇ ಸರ್ಕಾರ ಈ ನಿರ್ಧಾರ ಮಾಡಿದಂತಿದೆ. ಈ ಸರ್ಕಾರ ದೇಶದ ಒಕ್ಕೂಟ ವ್ಯವಸ್ಥೆಗೆ ಭಂಗ ತರುತ್ತಿದೆ. ಇತರ ಹಗರಣವನು ಗಮನದಲ್ಲಿ ಇಟ್ಟುಕೊಂಡು ಸಿಬಿಐನ್ನು ಬ್ಲಾಕ್ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಪುಟದಲ್ಲಿ ಒಪ್ಪಿಗೆ ಕೊಟ್ಟ ವಿಚಾರವನ್ನಷ್ಟೇ ಕಳುಹಿಸಬೇಕೆಂಬ ಇನ್ನೊಂದು ನಿರ್ಣಯವನ್ನೂ ಸಂಪುಟದಲ್ಲಿ ಮಾಡಿದ್ದಾರೆ. ಇದು ಕೂಡ ಆತಂಕದ ನಿರ್ಧಾರವೇ ಆಗಿದೆ. ಸಂಘರ್ಷಕ್ಕೆ ಎಡೆಮಾಡಿಕೊಡಲಿರುವ ಈ ನಿರ್ಧಾರವನ್ನು ಬಿಜೆಪಿ ಖಂಡಿಸುತ್ತದೆ ಎಂದರಲ್ಲದೆ ಗವರ್ನರ್ ಅವರು ರಾಜ್ಯ ಸರ್ಕಾರಕ್ಕೆ ಬರೆದ ಪತ್ರಕ್ಕೆ ಮುಖ್ಯ ಕಾರ್ಯದರ್ಶಿಗಳು ಉತ್ತರ ಕೊಡಬಾರದು ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಅವ ಮೇಲೆ ಆರೋಪ ಬಂದಾಗ ವಿಪಕ್ಷ ನಾಯಕನಾಗಿದ್ದ ಸಿದ್ದರಾಮಯ್ಯ ಅವರು, ಬಿಎಸ್‌ವೈ ಆವರ ರಾಜೀನಾಮೆಗೆ ಆಗ್ರಹಿಸಿದ್ದಲ್ಲದೆ, ನಿಷ್ಪಕ್ಷಪಾತ ತನಿಖೆಗೆ ಸಹಕರಿಸಲಿ ಎಂದು ಹೇಳಿದ್ದರು. ಈಗ ಸಿದ್ದರಾಮಯ್ಯನವರು ಯಾಕೆ ಸುಮ್ಮನಿದ್ದಾರೆ? ಅವರು ಕೂಡ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಕೆಗೆ ಸಹಕರಿಸಲಿ ಎಂದು ರಾಜ್‌ಗೋಪಾಲ್ ರೈ ಆಗ್ರಹಿಸಿದರು.
ಬಿಜೆಪಿ ವಕ್ತಾರ ಅರುಣ್ ಜಿ ಶೇಟ್, ಪ್ರಮುಖರಾದ ಡೊಂಬಯ್ಯ ಅರಳ, ಮೋಹನ್‌ರಾಜ್ ಕೆ.ಎ., ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಉಪಸ್ಥಿತರಿದ್ದರು.