ಕೇಂದ್ರ ಸರ್ಕಾರದಿಂದ ಪ್ರತಿಪಕ್ಷಗಳನ್ನು ಬುಡಮೇಲು ಷಡ್ಯಂತ್ರ: ಅಮಳ ರಾಮಚಂದ್ರ
ಪುತ್ತೂರು: ದೇಶದಲ್ಲಿ ಪ್ರತಿಪಕ್ಷಗಳ ಸರ್ಕಾರಗಳನ್ನು ಬುಡಮೇಲು ಮಾಡಲು ಕೇಂದ್ರ ಸರ್ಕಾರ ಪ್ರಾಯೋಜಿತ ಷಡ್ಯಂತ್ರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದರ ಭಾಗವಾಗಿಯೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕೈಗೊಂಬೆಯಾಗಿ, ಕೇಂದ್ರ ಸರಕಾರದ ಆಶಯದಂತೆ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ. ಏನೂ ತಪ್ಪು ಮಾಡದ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವೇ ಇಲ್ಲ. ಇವತ್ತು ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವ ರಾಜ್ಯದ ಬಿಜೆಪಿ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಕೇಳಿದರು.
ಜನಪ್ರಿಯತೆಯ ಉತ್ತುಂಗದಲ್ಲಿರುವ ಸಿದ್ದರಾಮಯ್ಯನವರನ್ನು ಮತ್ತು ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಹೇಗಾದರೂ ಮಾಡಿ ಹಣಿದು ಜೈಲಿಗೆಟ್ಟಬೇಕೆಂಬ ಉದ್ದೇಶದಿಂದಲೇ ರೂಪಿಸಲಾದ ರಾಜಕೀಯ ಪ್ರೇರಿತ ಷಡ್ಯಂತ್ರವಿದು. ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರ ಸಹಿ, ಆದೇಶ ಅಥವಾ ಯಾವುದೇ ಒತ್ತಡವಿಲ್ಲದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ, ಮುಡಾದಲ್ಲಿ ಬಿಜೆಪಿಯದ್ದೇ ಆಡಳಿತವಿದ್ದಾಗ, ಬಿಜೆಪಿಯವರೇ ರೂಪಿಸಿದ 50-50 ಅನುಪಾತದ ಪರಿಹಾರವನ್ನು ಅರ್ಹವಾಗಿಯೇ ಪಡೆದುಕೊಂಡ ಪ್ರಕರಣ ಇದಾಗಿದೆ.
40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಭ್ರಷ್ಟಾಚಾರ ಎಸಗದೆ ಪರಿಶುದ್ಧರಾಗಿರುವ ಸಿದ್ಧರಾಮಯ್ಯನವರ ಮುಖಕ್ಕೆ ಮಸಿ ಬಳಿದು ಅವರನ್ನು ಜೈಲಿಗಟ್ಟಲು ಈ ಪ್ರಕರಣ ರೂಪಿಸಿ, ರಾಜಕೀಯ ನಾಟಕ ಮಾಡುತ್ತಿರುವ ಪ್ರಧಾನಿ ಮೋದಿ, ಕರ್ನಾಟಕದ ರಾಜ್ಯಪಾಲರು ಮತ್ತು ಬಿಜೆಪಿ ನಾಯಕರ ಷಡ್ಯಂತ್ರವನ್ನು ಇಡೀ ಕಾಂಗ್ರೆಸ್ ಪಕ್ಷ ಯಾವುದೇ ಬೆಲೆಯನ್ನು ತೆತ್ತಾದರೂ ಎದುರಿಸುತ್ತೇವೆ ಮತ್ತು ಇದರ ಹಿಂದಿರುವ ಷಡ್ಯಂತ್ರಗಳನ್ನು ನಾವು ಬಯಲಿಗೊಳಿಸುತ್ತೇವೆ ಎಂದು ನುಡಿದರು.
ಸಿದ್ದರಾಮಯ್ಯ ವಿರುದ್ಧ ಪ್ರಾಸ್ಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರು, 2023ರಲ್ಲಿ ರಾಜ್ಯದ ಲೋಕಾಯುಕ್ತ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ಬಳ್ಳಾರಿ ಅಕ್ರಮ ಗಣಿಯ ಜನಾರ್ಧನ ರೆಡ್ಡಿಯವರ ಮೇಲೆ ಪ್ರಕರಣ ಹೂಡಲು ಅನುಮತಿ ಕೋರಿದಾಗ ಯಾಕೆ ಅನುಮತಿ ನೀಡಲಿಲ್ಲ? ರಾಜ್ಯಪಾಲರಿಗೆ ಈ ಪ್ರಕರಣದಲ್ಲಿ ಇರುವುದು ಪ್ರಾಮಾಣಿಕ ಆಸಕ್ತಿಯೇ ಹೌದಾಗಿದ್ದರೆ ಅವರು ಕಳೆದ ಫೆಬ್ರವರಿಯಲ್ಲಿ ಬಿಜೆಪಿಯ ಮುರುಗೇಶ್ ನಿರಾಣಿ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಸಲ್ಲಿಸಿದ ಕೋರಿಕೆ ಪತ್ರಕ್ಕೆ ಯಾಕೆ ಅನುಮತಿ ನೀಡಿಲ್ಲ? ಮೊಟ್ಟೆ ಹಗರಣದಲ್ಲಿ ತನಿಖೆ ನಡೆಸಲು 2021ರಲ್ಲಿ ಶಶಿಕಲಾ ಜೊಲ್ಲೆಯವರ ವಿರುದ್ಧ ಅನುಮತಿ ಕೋರಿದಾಗ ಯಾಕೆ ನೀಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹರೀಶ್ ಕೋಟ್ಯಾನ್, ಮೌರೀಸ್ ಮಸ್ಕರೇನಸ್, ಮಹಾಲಿಂಗ ನಾಯ್ಕ್ ಮತ್ತು ರಿಯಾಝ್ ಪರ್ಲಡ್ಕ ಉಪಸ್ಥಿತರಿದ್ದರು.