ಮೂಗಿಲ್ಲದವರ ನಾಡಿನಲಿ... ಮೀನಿನ ಮಾರುಕಟ್ಟೆ: ಆರೋಪ
ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿರುವ ಸುಸಜ್ಜಿತವಾಗಿದ್ದ ಮೀನಿನ ಮಾರುಕಟ್ಟೆ ಈಗ ಅವ್ಯವಸ್ಥೆಯಿಂದ ನರಳುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಇದಕ್ಕೆ ನಗರಸಭೆಯ ನಿರ್ಲಕ್ಷ್ಯವೇ ಕಾರಣವೆಂದು ಆರೋಪ ವ್ಯಕ್ತವಾಗಿದೆ.
ನಗರಸಭೆಗೆ ಹೊಂದಿಕೊಂಡೇ ಇರುವ ಈ ಮೀನಿನ ಮಾರುಕಟ್ಟೆಯ ಅವ್ಯವಸ್ಥೆ ನಗರಸಭೆಯ ಅಧಿಕಾರಿಗಳಿಗೆ ಮಾತ್ರ ಇನ್ನೂ ಕಂಡಿಲ್ಲ. ಮೀನಿನ ಮಾರುಕಟ್ಟೆಯ ಮುಂಭಾಗದಲ್ಲಿಯೇ ಹರಿಯುವ ಐಸ್‌ನೀರು ಮೀನಿನ ವಾಸನೆಯನ್ನು ದುಪ್ಪಟ್ಟುಗೊಳಿಸಿದೆ. ಮೀನಿನ ಮಾರುಕಟ್ಟೆಗೆ ಹೋಗುವ ಹಾಗೂ ಇಲ್ಲಿಂದ ಹಾದುಹೋಗುವ ಜನತೆ ಮೂಗುಮುಚ್ಚಿಕೊಂಡೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮಾರುಕಟ್ಟೆಯ ಪ್ರವೇಶ ಭಾಗದಲ್ಲಿ ಹಾಕಲಾದ ಸ್ಲ್ಯಾಬ್ ಗಳು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಮೀನಿನ ಬಾಕ್ಸೈಟ್ ಗಳನ್ನು ಇಡಲು ಒಳಗೆ ವ್ಯವಸ್ಥೆ ಮಾಡಿದ್ದರೂ ಗ್ರಾಹಕರು ಬರುವ ದಾರಿಯಲ್ಲಿಯೇ ಇಡಲಾಗುತ್ತಿದ್ದು, ಗ್ರಾಹಕರಿಗೆ ಮಾರುಕಟ್ಟೆ ಒಳಗೆ ಪ್ರವೇಶಕ್ಕೂ ತೊಂದರೆ ಉಂಟಾಗುತ್ತಿದೆ. ಮೀನು ಮಾರುಕಟ್ಟೆಯಿಂದ ಹರಿಯುವ ನೀರು ಮುಖ್ಯರಸ್ತೆ ತನಕವೂ ಹರಿಯಲಾರಂಭಿಸಿದೆ. ಮಳೆ ಬಂದರೆ ಈ ನೀರು ಚರಂಡಿಗೆ ಹರಿದು ಹೋಗಿ ವಾಸನೆಯೂ ಕಡಿಮೆಯಾಗುತ್ತದೆ. ಆದರೆ ಮಳೆ ಇಲ್ಲದ ದಿನಗಳಲ್ಲಿ ಮುಖ್ಯ ರಸ್ತೆಯಲ್ಲಿ ಸಂಚರಿಸುವ ಮಂದಿಗೂ ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ತಕ್ಷಣ ಈ ಮೀನಿನ ಮಾರುಕಟ್ಟೆಯ ಅವ್ಯವಸ್ಥೆಯನ್ನು ಸರಿಪಡಿಸಲು ನಗರಸಭೆ ಮುಂದಾಗಬೇಕಾಗಿದೆ. ಮಾರುಕಟ್ಟೆಯ ಮುಂಭಾಗದಲ್ಲಿರುವ ಮೀನಿನ ಬಾಕ್ಸೈಟ್ ಗಳನ್ನು ಮಾರುಕಟ್ಟೆಯ ಒಳಗೆ ಇಡಲು ಕ್ರಮಕೈಗೊಳ್ಳಬೇಕಾಗಿದೆ. ಮೀನಿನ ನೀರು ಹೊರಗೆ ಹರಿಯದಂತೆ ವ್ಯವಸ್ಥೆ ಮಾಡಬೇಕಾಗಿದೆ. ನಗರಸಭೆಯ ಅಧಿಕಾರಿಗಳು ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಜನತೆಯೇ ಇದರ ವಿರುದ್ಧ ಹೋರಾಟ ನಡೆಸಲು ಮುಂದಾಗಲಿದ್ದಾರೆ. ಮೂಗಿಲ್ಲದವರ ನಾಡಿನಲಿ ಈ ಮೀನಿನ ಮಾರುಕಟ್ಟೆ ಇದ್ದಂತೆ ಕಂಡುಬರುತ್ತಿದೆ. ಇನ್ನಾದರೂ ನಗರಸಭೆಯ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಲುಂಬುಡ ನಗರಸಭೆಯನ್ನು ಎಚ್ಚರಿಸಿದ್ದಾರೆ.