ಸೆ.29ರಂದು ಮಾತಾ ಅಮೃತಾನಂದಮಯಿ ಜನ್ಮದಿನಾಚರಣೆ
ಮಂಗಳೂರು: ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠ ವತಿಯಿಂದ ಮಾತಾ ಅಮೃತಾನಂದಮಯಿ ದೇವಿ ಅವರ ಜನ್ಮದಿನಾಚರಣೆ ‘ಅಮೃತೋತ್ಸವ-2024’ ಕಾರ್ಯಕ್ರಮವನ್ನು ಸೆ.೨೯ರಂದು ನಗರದ ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ಆಯೋಜಿಸಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದಸಮಿತಿ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ, ಅಂದು ಬೆಳಗ್ಗೆ 9ರಿಂದ ಮಠದ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮೃತ ಪ್ರಾಣ ಸಾರಥ್ಯದಲ್ಲಿ ಶ್ರೀ ಗುರುಪಾದುಕಾ ಪೂಜೆ ನಡೆಯಲಿದೆ ಎಂದರು.
ಸಮಾರಂಭದಲ್ಲಿ ಕಥಾಮೃತ ಎಂಬ ವಿಶೇಷ ಹರಿಕಥಾ ಕಾರ್ಯಕ್ರಮ ನಡೆಯಲಿದೆ. ಮಠದ ಮಾನವೀಯ ಸೇವಾ ಯೋಜನೆಗಳ ಅನ್ವಯ ವಸ್ತ್ರದಾನ ಹಾಗೂ ಅಮೃತ ಆರೋಗ್ಯ ಸೇವೆಗಳ ವಿತರಣೆ ನಡೆಯಲಿದೆ. ಇದೇ ಸಂದರ್ಭ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ನೂತನ ಸೇವಾ ಸಮಿತಿಗಳ ಪದಗ್ರಹಣ ಸಮಾರಂಭ ಜರುಗಲಿದೆ. ಮುಖ್ಯ ಅತಿಥಿಯಾಗಿ ಅದಾನಿ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಸುರೇಶ್ ಅಮೀನ್, ಉಡುಪಿ ಸಮಿತಿ ಅಧ್ಯಕ್ಷ ಯೋಗೀಶ್ ಕೊಡವೂರು, ಕೋಶಾಧಿಕಾರಿ ರಾಮನಾಥ ನಾಯಕ್, ವೈದ್ಯಕೀಯ ಪ್ರಕೋಷ್ಠಾದ ಡಾ.ದೇವದಾಸ್ ಪುತ್ರನ್ ಉಪಸ್ಥಿತರಿದ್ದರು.