ಅಂತಾರಾಷ್ಟ್ರೀಯ ಕ್ರೀಡಾಪಟು ಅಶ್ವಿನ್ ಸನಿಲ್‌ಗೆ ಹುಟ್ಟೂರ ಸನ್ಮಾನ

ಅಂತಾರಾಷ್ಟ್ರೀಯ ಕ್ರೀಡಾಪಟು ಅಶ್ವಿನ್ ಸನಿಲ್‌ಗೆ ಹುಟ್ಟೂರ ಸನ್ಮಾನ

ಅಶ್ವಿನ್ ಸಾಧನೆ ಕುರ್ಕಾಲಿನ ಪ್ರಸಿದ್ಧಿಯ ಮುಕುಟಕ್ಕೆ ಮತ್ತೊಂದು ಸ್ವರ್ಣಗರಿ: ಕುರ್ಕಾಲು ದಿನಕರ ಶೆಟ್ಟಿ 


ಶಿರ್ವ: ಕಳೆದ 50 ವರ್ಷಗಳಿಂದ ಕುರ್ಕಾಲು ಯುವಕ ಮಂಡಲ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಕ್ರೀಡಾಪಟುಗಳನ್ನು ಹುಟ್ಟುಹಾಕಿದೆ. ವಾಲಿಬಾಲ್ ಕ್ರೀಡೆಯಲ್ಲಿ ಕುರ್ಕಾಲು ಅನೇಕ ಸಾಧಕ ಕ್ರೀಡಾಳುಗಳನ್ನು ಬೆಳೆಸಿ ಪ್ರೋತ್ಸಾಹಿಸಿದೆ. ನಮ್ಮೂರ ಪ್ರತಿಭೆ ಅಶ್ವಿನ್ ಸನಿಲ್ ಊರಿನ ಪ್ರಸಿದ್ಧಿಯ ಮುಕುಟಕ್ಕೆ ಮತ್ತೊಂದು ಸ್ವರ್ಣಗರಿಯನ್ನು ಜೋಡಿಸಿ ಊರಿಗೆ ಅತ್ಯಂತ ಹೆಮ್ಮೆ ತಂದಿದ್ದಾರೆ ಎಂದು ಹುಟ್ಟೂರ ಸನ್ಮಾನ ಸಮಿತಿಯ ಅಧ್ಯಕ್ಷ ಕುರ್ಕಾಲು ದಿನಕರ ಶೆಟ್ಟಿ ಹೇಳಿದರು.

ಅವರು ಇತ್ತೀಚೆಗೆ ಡೆನ್ಮಾರ್ಕ್‌ನಲ್ಲಿ ನಡೆದ ಅಗ್ನಿಶಾಮಕ ದಳದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ದೇಹದಾಡ್ಯ ಮತ್ತು ಪವರ್ ಲಿಫ್ಟಿಂಗ್‌ನಲ್ಲಿ 2 ಚಿನ್ನ ಹಾಗೂ ನೂರು ಮೀಟರ್ ಓಟದಲ್ಲಿ ಕಂಚು ಗೆದ್ದಿರುವ, ಮುಖ್ಯಮಂತ್ರಿಗಳ ಪದಕ ಪುರಸ್ಕೃತ ಅಗ್ನಿಶಾಮಕ ದಳದ ಸಿಬಂದಿ, ಅಂತರಾಷ್ಟ್ರೀಯ ಕ್ರೀಡಾಪಟು ಅಶ್ವಿನ್ ಸನಿಲ್ ಕುರ್ಕಾಲು ಇವರಿಗೆ ‘ಹುಟ್ಟೂರ ಸನ್ಮಾನ ಸಮಿತಿಯ ವತಿಯಿಂದ ರವಿವಾರ ಕುರ್ಕಾಲು ಗಣೇಶೋತ್ಸವ ವೇದಿಕೆಯಲ್ಲಿ ಏರ್ಪಡಿಸಿದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಅಶ್ವಿನ್ ಸನಿಲ್ ಅವರನ್ನು ತಂದೆ ಶೇಖರ ಪೂಜಾರಿ, ತಾಯಿ ಬೇಬಿ ಪೂಜಾರ್ತಿ, ಪತ್ನಿ ಭವ್ಯ ಮತ್ತು ಪುತ್ರ ಅದ್ವಿತ್ ಅವರೊಂದಿಗೆ ಹುಟ್ಟೂರ ಸನ್ಮಾನ ಸಮಿತಿಯ ವತಿಯಿಂದ ಊರಿನ ನಾಗರಿಕರು ಮತ್ತು ಅಭಿಮಾನಿಗಳ ಪರವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಆಶ್ವಿನ್ ಸನಿಲ್ ತನ್ನ ಸಾಧನೆಗೆ ಪ್ರೋತ್ಸಾಹ ನೀಡಿದ ಊರವರ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಮಾಜಿ ಮಂಡಲ ಪ್ರಧಾನ ಡಿ.ಆರ್. ಕೋಟ್ಯಾನ್, ನಿವೃತ್ತ ಶಿಕ್ಷಕ ಶಿವರಾಮ್ ಶೆಟ್ಟಿ ಕುರ್ಕಾಲು, ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ವಿನಾಯಕ ಕಲ್ಕುಟ್ಕರ್, ಕುರ್ಕಾಲು ಗ್ರಾಮಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎ. ಪೂಜಾರಿ, ಸುಭಾಸ್ ನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಸುವರ್ಣ, ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿಯ ಅಧ್ಯಕ್ಷ ವಾಮನ ಪೂಜಾರಿ, ಕುರ್ಕಾಲು ಯುವಕ ಮಂಡಲದ ಅಧ್ಯಕ್ಷ ಪ್ರಸನ್ನ ಶೆಟ್ಟಿ, ಕುರ್ಕಾಲು ಸುಭಾಸ್‌ನಗರ ಶ್ರೀ ಬಗ್ಗ ಅಟೋ ಚಾಲಕ ಮಾಲಕರ ಸಂಘದ ಆಧ್ಯಕ್ಷ ಜಯ ಕುಮಾರ್ ಕರ್ಕಡ, ಕುರ್ಕಾಲು ಸುಭಾಸ್ ನಗರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದಿನೇಶ್ ಸೇರಿಗಾರ್, ಉಮೇಶ್ ಮಟ್ಟು ಹುಟ್ಟೂರ ಸನ್ಮಾನ ಸಮಿತಿ ಕೋಶಾಧಿಕಾರಿ ವಿಜಯ ಶೆಟ್ಟಿ ನೂಜಿ, ಕಾರ್ಯದರ್ಶಿ ಸುವಿತ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಭಾಸ್ ನಗರ ಲಯನ್ಸ್ ಕ್ಲಬ್, ನಾರಾಯಣಗುರು ಭಜನಾ ಮಂದಿರ, ಕುರ್ಕಾಲು ಯುವಕ ಮಂಡಲ, ಕುರ್ಕಾಲು ಗ್ರಾಮಪಂಚಾಯತ್ ಹಾಗೂ ಸಾರ್ವಜನಿಕರಿಂದ ಅಶ್ವಿನ್ ಸನಿಲ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಸಮಿತಿಯ ಅಧ್ಯಕ್ಷ ಕುರ್ಕಾಲು ದಿನಕರ ಶೆಟ್ಟಿ ಸ್ವಾಗತಿಸಿ, ವಿಜೇತಾ ಸುಮಿತ್ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ರಘುರಾಮ್ ಕೋಟ್ಯಾನ್ ಕುರ್ಕಾಲು ವಂದಿಸಿ, ಸತೀಶ್ಚಂದ್ರ ಶೆಟ್ಟಿ ಚಿತ್ರಪ್ಪಾಡಿ ನಿರೂಪಿಸಿದರು.

ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದ್ದು ಗಂಭೀರವಾಗಿ ತೊಡಗಿಕೊಂಡರೆ ಉತ್ತಮ ಅವಕಾಶಗಳು ಒದಗಿ ಬರಬಹುದು. ಸಾಧನೆಯ ಮೂಲಕ ದೇಶಕ್ಕೂ ಕೀರ್ತಿ ತರುವ ಅವಕಾಶ ಒದಗಿಬರುಬಹುದು. ಕ್ರೀಡಾಕೋಟದಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲೂ ಅವಕಾಶವಿದೆ. ಯುವಜನರು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಗಂಭೀರವಾಗಿ ತೊಡಗಿಕೊಳ್ಳಲು ಇಂತಹ ಸನ್ಮಾನ ಕಾರ್ಯಕ್ರಮಗಳಿಂದ ಸ್ಪೂರ್ತಿ ದೊರೆಯುತ್ತದೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು  ಅಶ್ವಿನ್ ಸನಿಲ್ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article