ರೈತರು ಕೃಷಿ ಪಂಪುಗಳಿಗೆ ಆಧಾರ್ ನೋಂದಣಿ ಮಾಡದಂತೆ ಕೃಷಿಕ ಸಂಘ ಕರೆ
ಶಿರ್ವ: ಮೆಸ್ಕಾಂ ಕೃಷಿ ಪಂಪುಗಳಿಗೆ ಆಧಾರ್ ನೋಂದಣಿಯ ಕೊನೆಯ ದಿನಾಂಕ ಘೋಷಣೆ ಮಾಡಿದೆ. ರೈತರು ಹೆದರಿ ಕಂಗಾಲಾಗಿ ಆಧಾರ್ ನೋಂದಣಿ ಮಾಡಬೇಡಿ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ರೈತರಿಗೆ ಕರೆ ನೀಡಿದೆ.
ನೋಂದಣಿ ಮಾಡಹೊರಟರೆ ಸಾವಿರಾರು ರೂ.ಗಳ ಬಾಂಡ್, ಖಾತೆ ಬದಲಾವಣೆಗೆ ಹಳೆಬಾಕಿ ಸಹಿತ ಠೇವಣಿ ಪಂಪು ಆಧರಿಸಿ 10-12 ಸಾವಿರ ಮೇಲ್ಪಟ್ಟು ವಸೂಲಿ ಮಾಡಲಾಗುತ್ತದೆ. ಕೆಲವು ವರ್ಗದ ರೈತರು ದುಬಾರಿ ಬಿಲ್ ಪಾವತಿಸಬೇಕು. ಹಲವರ ಪಂಪು ವಿದ್ಯುತ್ ಜೋಡಣೆ ವಜಾ ಆಗಲಿದೆ. ತುಂಡು ಹಿಡುವಳಿ, ಪಹಣಿ ಪತ್ರಿಕೆ, ಕುಟುಂಬ ಸಮಸ್ಯೆಯಂತಹ ಹಲವು ಕಾರಣಗಳಿಂದ ರೈತರಿಗೆ ಆಧಾರ್ ಲಿಂಕ್ ಮಾಡಲು ಅಸಾಧ್ಯವಾಗುತ್ತಿದೆ.
ಜಿಲ್ಲಾ ಕೃಷಿಕ ಸಂಘದ ಒತ್ತಾಯ:
ಆಧಾರ್ ನೋಂದಣಿ ಸರಳಗೊಳಿಸಿ. ಆಮೇಲೆ ಎಲ್ಲರೂ ಆಧಾರ್ ನೋಂದಣಿಗೆ ಮುಂದಾಗುತ್ತೇವೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಕೃಷಿಕರೆಲ್ಲ ಒಟ್ಟಾಗಿ ಪ್ರತಿಭಟನೆ ಹೋರಾಟ ನಡೆಸುವುದಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ.26 ರಂದು ಮೆಸ್ಕಾಂ ಅಧಿಕಾರಿಗಳೊಂದಿಗೆ ಭೇಟಿ:
ಉಡುಪಿ ಜಿಲ್ಲಾ ಕೃಷಿಕ ಸಂಘದ ಪದಾಧಿಕಾರಿಗಳು ಎಲ್ಲಾ ಕೃಷಿ ಪಂಪುದಾರರೊಂದಿಗೆ ಸೆ.26 ರಂದು ಸಂಜೆ 4 ಗಂಟೆಗೆ ಉಡುಪಿ ಕುಂಜಿಬೆಟ್ಟು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಾರ್ಯಾಲಯದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ರೈತರ ಬೇಡಿಕೆಯ ಪಟ್ಟಿಯನ್ನು ಸಲ್ಲಿಸಲಿದ್ದಾರೆ.
ಪ್ರಮುಖ ಬೇಡಿಕೆಗಳು:
1.ಆಧಾರ್ ನೋಂದಣಿ ಸರಳಗೊಳಿಸಬೇಕು.
2. ಖಾತೆ ಬದಲಾವಣೆಗೆ ಸಾವಿರಾರು ರೂಪಾಯಿಗಳ ಬಾಂಡ್, ಹಳೇಬಾಕಿ, ಸಹಿತ ಯಾವುದೇ ವಸೂಲಿ ಮಾಡಬಾರದು.
3. ಕೃಷಿಕರ ವರ್ಗೀಕರಣ ಕೂಡದು. ಎಲ್ಲಾ ಕೃಷಿ ಪಂಪುಗಳಿಗೂ ಉಚಿತ ವಿದ್ಯುತ್ ಸರಬರಾಜು ಮಾಡಬೇಕು.
4. ಜಮೀನು ವಾರಿಸುದಾರಿಕೆ ಪ್ರಕರಣಗಳಲ್ಲಿ ಪ್ರಸ್ತುತ ಕೃಷಿ ಮಾಡುತ್ತಿರುವವರ ಆಧಾರ್‌ನ್ನು ಲಿಂಕ್ ಮಾಡಬೇಕು.
5. ಆಧಾರ್ ಲಿಂಕ್ ಮಾಡಿಲ್ಲದ ಕಾರಣಕ್ಕೆ ಪಂಪು ವಿದ್ಯುತ್ ಸಂಪರ್ಕ ಕಡಿತ/ದಂಡ ವಿಧಿಸಬಾರದು.
6. ಆಧಾರ್ ನೋಂದಣಿಗೆ ಒಂದು ತಿಂಗಳ ಕಾಲಾವಕಾಶ ನೀಡಬೇಕು.