ನ್ಯಾಯಾಂಗದ ನಂಬಿಕೆ ಗಟ್ಟಿಯಾಯಿತು: ಮಟ್ಟಾರು ರತ್ನಾಕರ ಹೆಗ್ಡೆ

ನ್ಯಾಯಾಂಗದ ನಂಬಿಕೆ ಗಟ್ಟಿಯಾಯಿತು: ಮಟ್ಟಾರು ರತ್ನಾಕರ ಹೆಗ್ಡೆ


ಉಡುಪಿ: ನಮ್ಮ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿರುವುದು ನ್ಯಾಯಾಂಗ ವ್ಯವಸ್ಥೆ. ಬಡವರು, ನೊಂದವರಿಗೆ ಯಾರೇ ಅನ್ಯಾಯ ಮಾಡಿದರೂ, ನ್ಯಾಯಪೀಠ ಅನ್ಯಾಯ ಮಾಡುವುದಿಲ್ಲ ಎಂಬ ನಂಬಿಕೆ ಈ ದೇಶದ ಜನತೆಯಲ್ಲಿದೆ. ಮುಡಾ ಪ್ರಕರಣದ ತೀರ್ಪಿನಿಂದಾಗಿ ನ್ಯಾಯಾಂಗದ ಮೇಲಿನ ನಂಬಿಕೆ ಗಟ್ಟಿಯಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರತಿಪಾದಿಸಿದರು.

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹಿಸಿ ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮುಡಾ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ ತೀರ್ಪಿಗೆ ತಲೆಬಾಗಿ ಸಿಎಂ ರಾಜಿನಾಮೆ ನೀಡಲಿ. ತನಿಖೆ ಎದುರಿಸಿ ದೋಷಮುಕ್ತರಾದ ಬಳಿಕ ಮತ್ತೆ ಸಿಎಂ ಆಗಲಿ. ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಬದಲಾಗಿ ನ್ಯಾಯಾಂಗಕ್ಕೆ ಗೌರವ ನೀಡಿ ರಾಜಿನಾಮೆ ಕೊಡಲಿ ಎಂದರು.

ರಾಜ್ಯಪಾಲರು ಸಿಎಂ ವಿರುದ್ದದ ಖಾಸಗಿ ದೂರುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ತನಿಖೆಗೆ ಅನುಮತಿ ನೀಡಿದ್ದರು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಸಿಎಂ ಅರ್ಜಿ ವಜಾವಾಗಿದೆ. ಈಗ ಸಿಎಂ ಅವರಿಗೆ ರಾಜ್ಯದ ಜನತೆಯ ಮೇಲೆ ಗೌರವ, ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿದ್ದರೆ, ರಾಜಿನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಮಟ್ಟಾರು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗಾ, ರೇಷ್ಮಾ ಉದಯ್ ಶೆಟ್ಟಿ, ಸಂಧ್ಯಾ ರಮೇಶ್, ಕಾಪು ಮಂಡಲ ಅಧ್ಯಕ್ಷ ಜೀತೆಂದ್ರ ಶೆಟ್ಟಿ ಉದ್ಯಾವರ, ಮುಖಂಡರಾದ ನಯನಾ ಗಣೇಶ್, ದಿನೇಶ್ ಆಮೀನ್, ಶ್ರೀನಿಧಿ ಹೆಗ್ಡೆ, ಶ್ರೀಶಾ ನಾಯಕ್ ಪೆರ್ಣಂಕಿಲ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಶಿವಕುಮಾರ್ ಅಂಬಲಪಾಡಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ವಿಜಯ್ ಕೊಡವೂರು ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article