Teachers day special: ನನ್ನ ನಲ್ಮೆಯ ಶಿಕ್ಷಕಿಗೊಂದು ನುಡಿ ನಮನ
ನಾನು ಪದವಿ ವ್ಯಾಸಂಗಕ್ಕೆಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿಗೆ ಪ್ರವೇಶ ಪಡೆದುಕೊಂಡೆ. ಅದರಲ್ಲೂ ಪತ್ರಿಕೋದ್ಯಮ ವಿಷಯವೇ ಬೇಕು ಎಂದು ಆಯ್ಕೆ ಮಾಡಿಕೊಂಡೆ. ಅಲ್ಲಿ ಸಿಕ್ಕಿದ್ದು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಡಾ. ಸೌಮ್ಯ. ಇವರ ಬಗ್ಗೆ ನನ್ನ ಸೀನಿಯರ್ಗಳು ಬಹಳ ಹೆದರಿಸಿದ್ದರು. ಅವರು ಬಹಳ ಶಿಸ್ತಿಯ ಉಪನ್ಯಾಸಕಿ. ಬಹಳ ಜೋರು ಕೂಡ ಹೌದು ಎಂದೆಲ್ಲಾ ಹೇಳಿದ್ದರು. ಹಾಗಾಗಿ ಸಹಜವಾಗಿ ನನಗೂ ಆರಂಭದಲ್ಲಿ ಆಕೆಯನ್ನು ನೋಡಿದರೆ ಭಯವಾಗುತ್ತಿತ್ತು.
ಅದೆಷ್ಟು ಭಯವಾಗುತ್ತಿತ್ತು ಎಂದರೆ ತರಗತಿಯಲ್ಲಿ ಕೂತು ಪಾಠ ಕೇಳಲೂ ಹೆದರಿಕೆಯಾಗುತ್ತಿತ್ತು. ಆದರೆ ದಿನಕಳೆದಂತೆ ಎಲ್ಲವೂ ತಿಳಿಯಾಗುತ್ತಾ ಬಂದಿತು. ಭಯದ ಮನಸ್ಥಿತಿ ಬದಲಾಗಿ ಆಕೆಯ ಮೇಲೆ, ಗೌರವ, ಆದರಗಳು ಮನೆ ಮಾಡತೊಡಗಿತು. ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಬೈಯ್ಯುವುದು ಸರ್ವೇ ಸಾಮಾನ್ಯವಾಗಿತ್ತು. ಹೀಗೆ ಬೈಸಿಕೊಂಡವರ ಲಿಸ್ಟ್ನಲ್ಲಿ ನಾನು ಸೇರಿದ್ದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ಆದರೆ ನನ್ನ ಬಾಲ್ಯದಿಂದಲೂ ಇಂತಹ ಧೈರ್ಯಶಾಲಿ ಹೆಣ್ಣು ಮಗಳನ್ನು ಎಂದಿಗೂ ನೋಡಿರಲೇ ಇಲ್ಲ. ತರಗತಿಯಲ್ಲಿ ಅವರು ಬೈಯುವಾಗ ಮನಸ್ಸಿನಲ್ಲೇ ಸಾಕಷ್ಟು ಬಾರಿ ಅವರಿಗೆ ಬೈದದ್ದೂ ಇದೆ. ಆದರೆ ಅವರು ವಿದ್ಯಾರ್ಥಿಗಳನ್ನು ನೋಡಿಕೊಳ್ಳುವ ರೀತಿ, ಅವರ ಕೋಪದ ಹಿಂದಿರುವ ಕಾಳಜಿಯನ್ನು ನೋಡಿ ಅಕ್ಷರಶಃ ನಾನು ಅವರ ಫ್ಯಾನ್ ಆಗಿದ್ದು ಮಾತ್ರ ಸುಳ್ಳಲ್ಲ. ವಿದ್ಯಾರ್ಥಿಗಳು ಸಿರಯಾದ ದಾರಿಯಲ್ಲಿ ನಡೆಯಲು ನಿಮ್ಮಂತಹ ಗುರುಗಳ ಅಗತ್ಯ ಖಂಡಿತವಾಗಿಯೂ ಇದೆ ಎಂಬುದು ಆಗಲೇ ನನಗೆ ಅರಿವಾಗತೊಡಗಿತು.
ಕೋಪದ ಹಿಂದಿರುವ ವಿದ್ಯಾರ್ಥಿಗಳ ಬಗೆಗಿನ ಕಾಳಜಿ, ಮುಗ್ಧ ಮನಸ್ಸಿನ ಪ್ರೀತಿ ಅದೆಷ್ಟು ಮಂದಿಗೆ ಇರಲು ಸಾಧ್ಯ ಎನಿಸಿದ್ದು ಮಾತ್ರ ಸುಳ್ಳಲ್ಲ. ಇಂದು ಸಮಾಜದಲ್ಲಿ ಅದೆಷ್ಟೋ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದಂತಹ ಪ್ರಕರಣಗಳು ದಾಖಲಾಗುತ್ತಿವೆ. ಅವುಗಳನ್ನು ಕೇಳಿಯೇ ಮನಸ್ಸಿನಲ್ಲಿ ಸಣ್ಣದೊಂದು ಭಯ ಆವರಿಸಿಕೊಳ್ಳುತ್ತದೆ. ಆದರೆ ಇದ್ಯಾವುದರ ಪರಿವೇ ಇಲ್ಲದೇ ಇವರು ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಬೆಳಗ್ಗೆ 9 ಗಂಟೆಗೆ ಕಾಲೇಜಿನ ಬಂದು ಸಂಜೆ 4 ಗಂಟೆಗೆ ಮನೆಗೆ ತೆರಳುವ ಉಪನ್ಯಾಸಕರ ಸಾಲಿನಲ್ಲಿ ಇವರು ಮಾತ್ರ ಭಿನ್ನವಾಗಿ ಕಾಣಿಸುತ್ತಾರೆ. ಮಕ್ಕಳ ಭವಿಷ್ಯಕ್ಕೊಸ್ಕರ ತಮ್ಮ ವೈಯಕ್ತಿಕ ಬದುಕನ್ನೂ ಲೆಕ್ಕಿಸದೇ ಅವರಿಗಾಗಿ ಸಂಜೆ 7ರವರೆಗೂ ಕಾಲೇಜಿನ ಲ್ಯಾಬ್ನಲ್ಲೇ ಸಮಯ ಕಳೆಯುತ್ತಾರೆ.
ಇಂತಹ ಗುರುಗಳನ್ನು ನೋಡಿ ವಿದ್ಯಾರ್ಥಿಗಳಾದ ನಾವು ಸಾಕಷ್ಟು ಗುಣಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ನಮ್ಮ ಮಕ್ಕಳು ಓದಬೇಕು, ಮುಂದೆ ಬರಬೇಕು ಎಂಬ ಸದಭಿಪ್ರಾಯ ಹೊಂದಿರುವ ಶಿಕ್ಷಕರು ನಮಗೆ ಸಿಕ್ಕಿರುವುದು ಅದೃಷ್ಟವೇ ಸರಿ. ಮೇಡಂ ನೀವು ಬೈಯ್ಯುವ ಪ್ರತಿ ಮಾತಿನ ಹಿಂದೆ ಸಾವಿರಾರು ಅರ್ಥವಿದೆ. ವಿದ್ಯಾರ್ಥಿಗಳಿಗೆ ಅದೇನೇ ಕಷ್ಟ ಬಂದರೂ ನಿಮ್ಮದೇ ಮಕ್ಕಳ ಹಾಗೆ ಅವರ ಜೊತೆಗೆ ನಿಂತು ಧೈರ್ಯ ತುಂಬುತ್ತೀರಿ. ವಾಸ್ತವ ಬದುಕಿನ ಬಗ್ಗೆ ಅರಿವು ಮೂಡಿಸುತ್ತಾರೆ. ಒಬ್ಬ ತಾಯಿ ತನ್ನ ಮಗುವನ್ನು ಸಂತೈಸಿದ ಹಾಗೆ ಮಮತೆ ಹಾಗೂ ಪ್ರೀತಿಯಿಂದ ಸಂತೈಸುತ್ತೀರಿ. ನಿಮ್ಮಂತಹ ಗುರುಗಳನ್ನು ಪಡೆಯುವುದಕ್ಕೆ ನಮ್ಮಂತಹ ವಿದ್ಯಾರ್ಥಿಗಳು ತುಂಬಾ ಪುಣ್ಯ ಮಾಡಿರಬೇಕು. ಶಿಕ್ಷಕರ ದಿನದ ಶುಭಾಶಯಗಳು ಡಾ. ಸೌಮ್ಯ ಮೇಡಂ.
-ಆಶಾ ಎ.ಆರ್.
ದ್ವಿತೀಯ ಬಿಎ, ಪತ್ರಿಕೋದ್ಯಮ ವಿಭಾಗ,
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು.
