Teachers day special: ಶಿಕ್ಷಕಿ ರೂಪದಲ್ಲಿ ಕಂಡ ಸ್ಫೂರ್ತಿದಾಯಕ ಹೆಣ್ಣು ಮಗಳು
ನನ್ನ ಕಲ್ಪನೆಯಲ್ಲಿ ಒಂದು ಹೆಣ್ಣು ಎಂದರೆ ಧೈರ್ಯಶಾಲಿಯಾಗಿರಬೇಕು. ಯಾವುದೇ ಸಂದರ್ಭದಲ್ಲೂ ಗಟ್ಟಿಯಾಗಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಂಡಿರಬೇಕು. ಈ ಪುರುಷ ಪ್ರಧಾನ ಸಮಾಜದಲ್ಲಿ ಪುರುಷರ ಅಹಂಕಾರವನ್ನು ಲೆಕ್ಕಿಸದೇ ಹೆಣ್ಣು ಸ್ವತಂತ್ರವಾಗಿ ಬದುಕಬೇಕು. ಇಂತಹ ಗುಣಗಳನ್ನು ಹೊಂದಿರುವ ಹೆಣ್ಣನ್ನು ಸಾಕಷ್ಟು ವರ್ಷಗಳಿಂದ ಹುಡುಕುತ್ತಲೇ ಇದ್ದೆ. ಆದರೆ ನಾನು ಪಿಯುಸಿ ಮುಗಿಸುವವರೆಗೂ ಅಂತಹ ಹೆಣ್ಣು ಮಗಳು ನನಗೆ ಎಲ್ಲೂ ಕಾಣಲೇ ಇಲ್ಲ. ಆದರೆ ಪದವಿ ವ್ಯಾಸಂಗ ಮಾಡಲು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿಗೆ ಅದರಲ್ಲೂ ಪತ್ರಿಕೋದ್ಯಮ ವಿಭಾಗಕ್ಕೆ ಸೇರಿದ ಮೇಲೆ ಇಂತಹ ವ್ಯಕ್ತಿತ್ವದ ಪರಿಚಯವಾಯಿತು.
ಆಕೆ ಹೆಸರು ಡಾ. ಸೌಮ್ಯ ಕೆ.ಬಿ. ವೃತ್ತಿಯಲ್ಲಿ ಉಪನ್ಯಾಸಕಿ. ಆಕೆ ನೋಡಲು ಗಂಭೀರ ವಧನೆ. ತರಗತಿಯಲ್ಲಿ ಪಾಠ ಮಾಡಿದ್ದಕ್ಕಿಂತ ಬೈಯುವುದೇ ಹೆಚ್ಚು. ಬಹಳ ಶಿಸ್ತಿನ ಹೆಣ್ಣು ಮಗಳು. ಹಾಗಾಗಿ ವಿದ್ಯಾರ್ಥಿಗಳಿಂದಲೂ ಅದೇ ರೀತಿಯ ಶಿಸ್ತನ್ನು ಬಯಸುತ್ತಾರೆ. ಇದೇ ಮನಸ್ಥಿತಿ ಆರಂಭದ ದಿನಗಳಲ್ಲಿ ವಿದ್ಯಾರ್ಥಿಯಾದ ನನಗೆ ಬಹಳ ಕಿರಿಕಿರಿಯಾಗುತ್ತಿತ್ತು. ಇದೇ ಕಾರಣಕ್ಕಾಗಿ ಅವರ ಕ್ಲಾಸಿಗೆ ನಾವೆಲ್ಲರೂ ಭಯದಿಂದಲೇ ಹೋಗುತ್ತಿದ್ದೆವು. ಅವರು ಕ್ಯಾಂಪಸ್ಸಿನಲ್ಲಿ ಎಲ್ಲೇ ಕಂಡರೂ ಅಡಗಿಕೊಳ್ಳುತ್ತಿದ್ದೆವು. ತರಗತಿಗೆ ಸ್ವಲ್ಪ ತಡವಾದರೂ ಬೈಯುತ್ತಾರೆ ಎಂಬ ಭಯಕ್ಕೆ ಓಡೋಡಿ ಬರುತ್ತಿದ್ದೆವು.
ಒಮ್ಮೆ ತರಗತಿಯಲ್ಲಿ ಅವರು ಕೇಳಿದ ಪ್ರಶ್ನೆಗೆ ಸರಿಯಾಗಿ ಯಾರೂ ಉತ್ತರ ನೀಡಲಿಲ್ಲ ಎಂಬ ಕಾರಣಕ್ಕೆ ತರಗತಿಯನ್ನೇ ಬಿಟ್ಟು ಹೊರ ನಡೆದುಬಿಟ್ಟರು. ಮೊದಲೇ ಗಂಭೀರವಧನೆಯಾದ್ದರಿಂದ ಅವರನ್ನು ಕಂಡರೆ ನಮಗೆ ಯಾವಾಗಲೂ ಭಯವೇ ಆಗುತ್ತಿದ್ದುದು ಹೆಚ್ಚು. ಆದರೆ ದಿನಕಳೆದಂತೆ, ಅವರು ಸ್ವಲ್ಪ ಸ್ವಲ್ಪವೇ ಅರ್ಥವಾಗುತ್ತಾ ಹೋದರು. ಅವರ ಕುರಿತಾಗಿ ಹೆಚ್ಚಿನ ವಿಷಯಗಳು ತಿಳಿದಂತೆ, ನಾನು ಈ ಮೊದಲು ಹುಡುಕುತ್ತಿದ್ದ ನನ್ನ ಕಲ್ಪನೆಯ ಹೆಣ್ಣು ಮಗಳ ಪರಿಚಯವಾಯಿತು. ಅವರ ಜೀವನ ಶೈಲಿ, ಅವರಲ್ಲಿ ಇರುವ ಒಳ್ಳೆಯತನ ಎಲ್ಲವೂ ನನಗೆ ಒಂದೊಂದಾಗಿ ಇಷ್ಟವಾಗತೊಡಗಿತು. ಅವರ ಮೇಲೆ ಗೌರವ, ಪ್ರೀತಿ ಎಲ್ಲವೂ ಹುಟ್ಟತೊಡಗಿತು. ಆದ್ದರಿಂದ ಅವರು ನನ್ನ ಜೀವನದ ನೆಚ್ಚಿನ ಶಿಕ್ಷಕಿ ಆಗಿದ್ದಾರೆ.
ಸ್ವಾಭಿಮಾನಿಯಾಗಿ, ಅದೆಷ್ಟೇ ಕಷ್ಟ ಬಂದರೂ ಎದುರಿಸುತ್ತಿದ್ದರು. ಅವರನ್ನು ಅರ್ಥ ಮಾಡಿಕೊಂಡ ನಂತರವೇ ಅವರ ಕೋಪದ ಹಿಂದಿನ ಪ್ರೀತಿ ಹಾಗೂ ಅವರು ಬೈಯುವುದರ ಹಿಂದೆ ಇರುವ ಕಾಳಜಿ ಅರ್ಥವಾಗತೊಡಗಿತು. ಇದೇ ಕಾರಣಕ್ಕೆ ಅವರು ನನ್ನ ಬದುಕಿನ ಸ್ಫೂರ್ತಿಯಾಗಿ ಬದಲಾದರು. ನಾನು ಬೆಳೆದ ಪರಿಸರ ಆಗಿರಬಹುದು ಅಥವಾ ನನ್ನ ಸುತ್ತಮುತ್ತಲಿರುವ ವಾತಾವರಣದಲ್ಲಿ ಸಾಕಷ್ಟು ಬಾರಿ ಇಂತಹ ಗುಣಗಳನ್ನು ಹೊಂದಿರುವ ಹೆಣ್ಣು ಮಗಳನ್ನು ಹುಡುಕುತ್ತಲೇ ಇದ್ದೆ. ಈಕೆಯನ್ನು ನೋಡಿದ ನಂತರ ಆಕೆಯಂತೆಯೇ ನಾನು ಕೂಡ ಸ್ವಾಭಿಯಾನಿಯಾಗಿ, ಧೈರ್ಯವಾಗಿ ಪುರುಷನಷ್ಟೇ ಸರಿಸಮಾನವಾಗಿ ಬದುಕಬೇಕು ಎಂಬ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಾಗಿದೆ.
ಅದೆಷ್ಟೋ ಬಾರಿ ಹೆಣ್ಣು ಮಕ್ಕಳು ಹೀಗೆ ಬದುಕುವುದು ಅಸಾಧ್ಯದ ಮಾತು. ಇದೆಲ್ಲವೂ ಕೇವಲ ಕಲ್ಪನೆಗೆ ಮಾತ್ರ ಸೀಮಿತ ಎಂದೆಲ್ಲಾ ಎನಿಸುತ್ತಿತ್ತು. ಆದರೆ ಈಕೆಯನ್ನು ನೋಡಿದಾಗಿನಿಂದ ಬದುಕಿನಲ್ಲಿ ಹೊಸ ಹುರುಪೊಂದು ಶುರುವಾಗಿದೆ. ನಾನು ಇದೇ ರೀತಿ ಬದುಕಬಹುದು ಎಂಬುದು ನನಗಾಗ ಅರಿವಿಗೆ ಬಂದಿತು. ಇಂತಹ ಆದರ್ಶಪ್ರಾಯ ಹಾಗೂ ಸ್ಫೂರ್ತಿದಾಯಕ, ಮಾದರಿ ಗುಣಗಳನ್ನು ಗುಣಗಳನ್ನು ಹೊಂದಿರುವ ಶಿಕ್ಷಕಿಯನ್ನು ಉಪನ್ಯಾಸಕಿಯಾಗಿ ಪಡೆದ ನಾನೇ ಧನ್ಯ. ಮತ್ತೊಮ್ಮೆ ನನ್ನ ನೆಚ್ಚಿನ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
-ಅನಿತಾ.
ದ್ವಿತೀಯ ಬಿಎ, ಪತ್ರಿಕೋದ್ಯಮ ವಿಭಾಗ,
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು.
