ಬಿಪಿಎಲ್ ಕಾರ್ಡ್ ರದ್ದತಿ ಕೈಬಿಡದಿದ್ದಲ್ಲಿ ಅಹೋರಾತ್ರಿ ಧರಣಿ: ಯಶಪಾಲ್ ಸುವರ್ಣ

ಬಿಪಿಎಲ್ ಕಾರ್ಡ್ ರದ್ದತಿ ಕೈಬಿಡದಿದ್ದಲ್ಲಿ ಅಹೋರಾತ್ರಿ ಧರಣಿ: ಯಶಪಾಲ್ ಸುವರ್ಣ


ಉಡುಪಿ: ಜಿಲ್ಲೆಯಲ್ಲಿ 40 ಸಾವಿರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಸರಕಾರ ಈ ಪ್ರಕ್ರಿಯೆಯನ್ನು ಕೈಬಿಡದೇ ಇದ್ದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಡುಪಿ ತಾಲೂಕಿನ 11,250 ಹಾಗೂ ಬ್ರಹ್ಮಾವರ ತಾಲೂಕಿನ 5,700 ಪಡಿತರ ಚೀಟಿಗಳು ರದ್ದಾಗಿವೆ. ಗ್ರಾಮವೊಂದರಲ್ಲಿ 250ರಿಂದ 300 ಕುಟುಂಬಗಳ ಬಿಪಿಎಲ್ ಕಾರ್ಡ್ ರದ್ದಾಗುತ್ತಿದೆ. ಬಡವರಿಗೆ ನೀಡುವ ಬಿಪಿಎಲ್ ಕಾರ್ಡ್‌ನ್ನು ಕಸಿದುಕೊಂಡು ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರಕಾರ ಈ ನಿಲುವು ತಳಿದಿದೆ. ಈ ಅವೈಜ್ಞಾನಿಕ ನೀತಿಯನ್ನು ಸರಕಾರ ತಕ್ಷಣ ಕೈಬಿಡಬೇಕು ಎಂದರು.

ವಸತಿ ರಹಿತ ಬಡವರಿಗೆ ಕಳೆದ 2 ವರ್ಷದಿಂದ ಯಾವುದೇ ಮನೆ ನೀಡುವ ಕಾರ್ಯ ಆಗಿಲ್ಲ. ಬಡ ವಸತಿ ರಹಿತ ಕುಟುಂಬಗಳು ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಜ್ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿ, ಮನೆ ಮಂಜೂರಾತಿಗಾಗಿ ಕಾಯುತ್ತಿದ್ದಾರೆ. 2023ರ ಗಾಳಿಮಳೆಯಿಂದ ಮನೆ ಕಳೆದುಕೊಂಡವರಿಗೆ ಮಂಜೂರಾದ ಪರಿಹಾರ ಸಿಕ್ಕಿಲ್ಲ. ಈ ಮುಂಗಾರಿನಲ್ಲಿ ಮನೆ ಕಳೆದುಕೊಂಡವರಿಗೆ ಅತ್ಯಲ್ಪ ಪರಿಹಾರ ಮಂಜೂರು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಉಡುಪಿ ನಗರದ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಪಾವತಿಸದೇ ಮೆಸ್ಕಾಂನವರು ಸಂಪರ್ಕ ಕಡಿತಗೊಳಿಸಿರುವುದು, ಜಿಲ್ಲಾಸ್ಪತ್ರೆಯಲ್ಲಿ ಎಮ್.ಆರ್.ಐ/ ಸಿಟಿ ಸ್ಕ್ಯಾನಿಂಗ್ ಗುತ್ತಿಗೆ ಪಡೆದ ಸಂಸ್ಥೆಗೆ ಹಣ ಪಾವತಿಸದೇ ಬಡವರು ಸೌಲಭ್ಯ ವಂಚಿತರಾಗಿದ್ದಾರೆ. ಇದೆಲ್ಲವೂ ಕಾಂಗ್ರೆಸ್ ಸರಕಾರ ದಿವಾಳಿಯಾಗಿರುವುದಕ್ಕೆ ಜ್ವಲಂತ ಸಾಕ್ಷಿ ಎಂದರು.

25 ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಿಸಲು ಏಕ ವಿನ್ಯಾಸ (ಸಿಂಗಲ್ ಲೇಔಟ್) ಗ್ರಾ.ಪಂ ನಲ್ಲೇ ಪಡೆಯಬಹುದಿತ್ತು. ಈಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪಡೆಯುವಂತೆ ಕಾನೂನು ಮಾಡಲಾಗಿದೆ. ಅದರಿಂದ ಪ್ರಾಧಿಕಾರಕ್ಕೆ ಅರ್ಜಿಗಳು ಬರುತ್ತಿದ್ದರೂ ಅದನ್ನು ವಿಲೇವಾರಿ ಮಾಡಲು ಸಿಬ್ಬಂದಿಗಳೇ ಇಲ್ಲ. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟದ ಹಾದಿ ಹಿಡಿಯಲಾಗುತ್ತದೆ ಎಂದು ಎಚ್ಚರಿಸಿದರು.

ಮಲ್ಪೆ- ಹೆಬ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಆದಿವುಡುಪಿ ಭಾಗದಲ್ಲಿ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಮಳೆ ವಿರಾಮ ನೀಡಿದ ತಕ್ಷಣ ಕಾಮಗಾರಿ ಆರಂಭಿಸಲಾಗುತ್ತದೆ. ಸಂತೆಕಟ್ಟೆಯಲ್ಲಿಯೂ ಮಳೆಯಿಂದಾಗಿ ಸಮಸ್ಯೆಯಾಗುತ್ತಿದೆ. ಮಳೆ ಕಡಿಮೆಯಾದ ಕೂಡಲೇ ಎರಡೂ ಭಾಗದ ಸರ್ವಿಸ್ ರಸ್ತೆ ತೆರೆಯಲಾಗುತ್ತದೆ. ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಸೇತುವೆ ಕಾಮಗಾರಿ ಆರಂಭವಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ, ನಗರಸಭಾಧ್ಯಕ್ಷ ಪ್ರಭಾಕರ್ ಪೂಜಾರಿ, ಶ್ಯಾಮ್ ಪ್ರಸಾದ್ ಭಟ್ ಉಪಸ್ಥಿತರಿದ್ದರು.


ಬೇಡಿಕೆಗಳು:

* ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಕಾಲಕಾಲಕ್ಕೆ ವೇತನ ನೀಡುತ್ತಿಲ್ಲ

* ನಿಗಮ ಮಂಡಳಿಗಳ ನೌಕರರಿಗೆ ಕಳೆದ ೪-೬ ತಿಂಗಳಿಂದ ವೇತನ ನೀಡಿಲ್ಲ

* ಮೆಸ್ಕಾಂ ಇಲಾಖೆಯಿಂದ ಶಾಲಾ-ಕಾಲೇಜು ಸರಕಾರಿ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ

* ಸರಕಾರಿ ಆಸ್ಪತ್ರೆಗಳಲ್ಲಿ ಎಂ.ಆರ್‌ಐ ಸ್ಕ್ಯಾನ್ ಸೇವೆ ವ್ಯತ್ಯಯಗೊಂಡಿದೆ.

* ವಿಎಗಳು ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಮುಷ್ಕರ ಮಾಡುತ್ತಿದ್ದು, ಸಾರ್ವಜನಿಕರ ಸೇವೆ ವ್ಯತ್ಯಯವಾಗಿದೆ.

* ಪ್ರಾಕೃತಿಕ ವಿಕೋಪದಡಿ ೨೩೪ ಕೋ ರೂ. ನಷ್ಟ ಜಿಲ್ಲಾಡಳಿತ ವರದಿ ಮಾಡಿಕೊಂಡಿದ್ದು ಈವರೆಗೆ ಯಾವುದೇ ಪರಿಹಾರ ಬಿಡುಗಡೆಯಾಗಿಲ್ಲ.

* ಗ್ರಾಮೀಣ ಭಾಗದ ಏಕವಿನ್ಯಾಸ ಅನುಮೋದನೆಯನ್ನು ನಗರ ಮತ್ತು ಗ್ರಾಮಾಂತರ ಇಲಾಖೆಗೆ ನೀಡಿ ಆದೇಶಿಸಿ, ಹಳ್ಳಿಗಳಲ್ಲಿ ಮನೆ ನಿರ್ಮಾಣ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

* ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅನುದಾನ ನೀಡುತ್ತಿಲ್ಲ.

* ಗ್ಯಾರಂಟಿಗಳಿಗೆ ಅನುದಾನ ಬಿಡುಗಡೆ ಮಾಡದೇ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿ ಕೋಟ್ಯಂತರ ವೇತನ ನೀಡಿ ಸಾರ್ವಜನಿಕರ ಹಣ ಪೋಲು ಮಾಡಲಾಗುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article