ಸಾಮರಸ್ಯವೇ ಬದುಕಿನ ಮೂಲ ಗುರಿ: ಮುನಿರಾಜ ರೆಂಜಾಳ
ಉಜಿರೆ: ಸಾಮರಸ್ಯವೇ ಬದುಕಿನ ಮೂಲ ಗುರಿಯಾಗಿದ್ದು, ಭಜನೆಗೆ ಜಾತಿ, ಮತ, ಪಂಥಗಳು ಅಡ್ಡಿಯಾಗುವುದಿಲ್ಲ. ಹಾಗಾಗಿ ಭಜನೆಯ ಮೂಲವೇ ಸಾಮರಸ್ಯ ಮೂಡಿಸುವುದು. ಭಜನೆಯು ಮನಸ್ಸಿನ ಮೇಲೆ ಪರಿಣಾಮ ಬೀರಲು ಅದರ ಅರ್ಥ ಗಮನಿಸುವುದು ಮುಖ್ಯವಾಗುತ್ತದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ೨೬ನೇ ವರ್ಷದ ಭಜನಾ ಕಮ್ಮಟದ 6ನೇ ದಿನದ ಕಾರ್ಯಕ್ರಮದಲ್ಲಿ ಧರ್ಮಸ್ಥಳದಲ್ಲಿ ‘ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ’ ಕುರಿತು ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿ ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಎಚ್ಚರಿಕೆ ನೀಡುವ ಕೆಲಸವನ್ನು ಭಜನೆ ಮಾಡುತ್ತದೆ. ದೇವರ ಭಜನೆಯಷ್ಟೇ, ನೀತಿಯುಕ್ತ ಭಜನೆಗಳಿಗೂ ಮಹತ್ವ ನೀಡಬೇಕಾಗಿದೆ. ದೇವರ ಮೇಲೆ ಶ್ರದ್ಧೆ ಇದ್ದಾಗ ಅಹಂಕಾರ ಇರಲು ಸಾಧ್ಯವಿಲ್ಲ. ಹಾಗಾಗಿ, ಭಜನೆಯ ಮೂಲಕ ಭಗವಂತನ ಗೆಲ್ಲಲು ಸಾಧ್ಯ. ದೇಶಭಕ್ತಿ ಇದ್ದವರಲ್ಲಿ ದೈವ ಭಕ್ತಿಯೂ ಇರುತ್ತದೆ, ಮನುಷ್ಯನು ಎರಡನ್ನೂ ಅಳವಡಿಸಿಕೊಳ್ಳಬೇಕು. ಆಗ ಸಾಮರಸ್ಯ ಮೂಡುತ್ತದೆ ಎಂದರು.
ಉಪ್ಪುಂದ ರಾಜೇಶ್ ಪಡಿಯಾರ್, ಮೈಸೂರು ಹಾಗೂ ರಾಮಕೃಷ್ಣ ಕಾಟುಕುಕ್ಕೆ, ಗಾಯಕರು ಕಾಸರಗೋಡು ಇವರು ಹಾಡುಗಳನ್ನು ಸುಂದರವಾಗಿ ಕಲಿಸಿಕೊಟ್ಟರು. ಕಮ್ಮಟಕ್ಕೆ ಆಗಮಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಪ್ರೇರೇಪಿಸಿದರು.
ಧರ್ಮಸ್ಥಳದ ‘ಮಹೋತ್ಸವ ಸಭಾಭವನ’ದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿದ್ದ ೨೬ನೇ ವರ್ಷದ ‘ಭಜನಾ ತರಬೇತಿ ಕಮ್ಮಟ’ ಕಾರ್ಯಾಗಾರದ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಶುಕ್ರವಾರ ‘ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ’ ಕುರಿತು ಉಪನ್ಯಾಸ ನೀಡಿದರು.
ಎಸ್‌ಡಿಎಂ ನ್ಯಾಚುರೋಪತಿ ಕಾಲೇಜು ಉಜಿರೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಪ್ರದರ್ಶನ ನಡೆಯಿತು. ಯೋಗ ತರಬೇತಿಯನ್ನು ಡಾ. ಐ. ಶಶಿಕಾಂತ್ ಜೈನ್ ನಡೆಸಿಕೊಟ್ಟರು. ಸೌಮ್ಯ ಸುಭಾಷ್, ಧರ್ಮಸ್ಥಳ ಇವರು ಸಾಂಪ್ರದಾಯಿಕ ಹಾಡುಗಳನ್ನು ಕಲಿಸಿಕೊಟ್ಟರು. ಭಜನಾ ತರಬೇತಿ ಕಮ್ಮಟದ ಶಿಬಿರಾರ್ಥಿಗಳಿಂದ ೩ನೇ ದಿನದ ನಗರ ಸಂಕೀರ್ತನೆ ಕಾರ್ಯಕ್ರಮ ನಡೆಯಿತು. ಭಜನಾ ಕಮ್ಮಟದ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿಗಳಾದ ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್ ಅವರು ದಿನದ ಕಾರ್ಯಕ್ರಮವನ್ನು ಸಂಘಟಿಸಿದರು.
ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಸದಸ್ಯರಾದ ಪದ್ಮರಾಜ್ ಜೈನ್, ಪೂರ್ಣಿಮ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಮಹಾವೀರ ಅಜ್ರಿ, ಭವಾನಿ, ಮೋಹನ್ ಶೆಟ್ಟಿ, ಸತೀಶ್ ಪೈ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರ ನಡೆಸಿಕೊಟ್ಟರು. ಸಮನ್ವಯಾಧಿಕಾರಿಗಳಾಗಿ ರಾಘವೇಂದ್ರ, ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.