ಪೊಳಲಿ(ಅಡ್ಡೂರು) ಸೇತುವೆಯಲ್ಲಿ ಮುಂದುವರಿದ ನಿರ್ಬಂಧ, ಬಸ್ ಮಾಲಕರಿಗೆ ನಷ್ಟ: ಸಂಚಾರ ಸ್ಥಗಿತಕ್ಕೆ ಚಿಂತನೆ

ಪೊಳಲಿ(ಅಡ್ಡೂರು) ಸೇತುವೆಯಲ್ಲಿ ಮುಂದುವರಿದ ನಿರ್ಬಂಧ, ಬಸ್ ಮಾಲಕರಿಗೆ ನಷ್ಟ: ಸಂಚಾರ ಸ್ಥಗಿತಕ್ಕೆ ಚಿಂತನೆ


ಬಂಟ್ವಾಳ: ಪೊಳಲಿ(ಅಡ್ಡೂರು) ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧ ಮುಂದುವರಿದಿದ್ದರಿಂದ ಈ ರೂಟಿನಲ್ಲಿ ಸಂಚರಿಸುವ ಖಾಸಗಿ ಬಸ್ ಗಳಿಗೆ ದೊಡ್ಡ ಮಟ್ಟದಲ್ಲಿಯೇ ಹೊಡೆತ ಬಿದ್ದಿದೆ ಎಂಬ ಆರೋಪ ಬಸ್ ಮಾಲಕರಿಂದ ವ್ಯಕ್ತವಾಗಿದೆ.

ಸೆ.9ರಂದು ಸಾಮಥ್ಯ೯ ಪರೀಕ್ಷಾ ಯಂತ್ರ ಪೊಳಲಿ ಸೇತುವೆ ತೀರಕ್ಕೆ ಬಂದು ಮೂರು ದಿನಗಳ ಕಾಲ ಇದ್ದು,ಸೇತುವೆಯ ಪ್ರತಿ ಕಂಬ(ಕುಂದ)ದ ಸಾಮರ್ಥ್ಯ ಪರೀಕ್ಷಿಸಿ ಸೆ.12 ರಂದು ಯಂತ್ರ ಪೊಳಲಿ ಸೇತುವೆಯ ಮೇಲಿಂದ ತೆರಳಿತ್ತು. ಸೇತುವೆಯ ಸಾಮಥ್ಯ೯ ಕುರಿತ ವರದಿಯನ್ನು ಲೋಕೋಪಯೋಗಿ ಇಲಾಖಾ ಇಂಜಿನಿಯರ್‌ಗೆ ಸಲ್ಲಿಸಲಾಗುವುದು ಆಬಳಿಕ ಅವರು ಈ ವರದಿಯನ್ನು ಜಿಲ್ಲಾಧಿಕಾರಿಯವರಿಗೆ ಒಪ್ಪಿಸಲಿದ್ದಾರೆ. ಈ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು.

ಆದರೆ ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆದು ಹತ್ತು ದಿನ ಕಳೆದರೂ ಇದರ ವರದಿ ಜಿಲ್ಲಾಧಿಕಾರಿಯವರ ಕೈ ಸೇರಿದೆಯೇ, ಇಲ್ಲವೆ ಎಂಬುದು ಪೊಳಲಿ ಅಸುಪಾಸಿನ ನಾಗರಿಕರನ್ನು ಕಾಡಿದೆ. ಇತ್ತ ಸೇತುವೆಯಲ್ಲಿ ಬಸ್ ಸೇರಿದಂತೆ ಘನ ವಾಹನ ಸಂಚಾರ ನಿಷೇಧ ಮುಂದುವರಿದಿದ್ದರಿಂದ ಗ್ರಾಮಸ್ಥರು ಗರಂ ಆಗಿದ್ದಾರೆ.

ಈ ನಡುವೆ ಸಂಚಾರ ನಿರ್ಬಂಧಿಸಿರುವ ಹಿನ್ನಲೆಯಲ್ಲಿ ಬಿ.ಸಿ. ರೋಡು-ಪೊಳಲಿ-ಕೈಕಂಬ ರೂಟ್‌ನಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳಿಗೆ ನಷ್ಟ ವನ್ನುಂಟು ಮಾಡಿದೆ ಎಂದು ಆರೋಪಿಸಿರುವ ಬಸ್ಸು ಮಾಲಕರು ಈ ತಿಂಗಳಾಂತ್ಯಕ್ಕೆ ಅನಿವಾರ್ಯವಾಗಿ ಕಾನೂನಿನನ್ವಯ ತಮ್ಮ ಟ್ಯಾಕ್ಸ್ ಸರಂಡರ್ ಮಾಡಿ ಬಸ್ಸು ಸಂಚಾರ ಸ್ಥಗಿತಗೊಳಿಸಲು ಮುಂದಾಗಿದ್ದಾರೆ.

ಸೇತುವೆಯಲ್ಲಿ ಘನ ವಾಹನ ನಿಷೇಧದಿಂದ ಪ್ರಸ್ತುತ ಬಸ್ಸುಗಳು ಬಿ.ಸಿ. ರೋಡಿನಿಂದ ಪೊಳಲಿ ಹಾಗೂ ಕೈಕಂಬದಿಂದ ಅಡ್ಡೂರುವರೆಗೆ ಸಾಗುತ್ತಿದ್ದು, ಇದರಿಂದ ಬಸ್ಸುಗಳಿಗೆ ಟ್ರಿಪ್ ಇಲ್ಲದಾಗಿದೆ. ದಿನನಿತ್ಯ ಸುಮಾರು 300 ಕಿ.ಮೀ. ಓಡುತ್ತಿದ್ದ ಬಸ್ಸುಗಳು ಪ್ರಸ್ತುತ ಬರೀ 170-180 ಕಿ.ಮೀ. ಓಡುತ್ತಿವೆ. ಉಳಿದ ಹೊತ್ತಿನಲ್ಲಿ ಬಸ್ಸುಗಳು ನಿಂತೇ ಇರಬೇಕಾಗಿದ್ದು, ಇಂತಹ ಟ್ರಿಪ್‌ನಿಂದ ಪ್ರಯಾಣಿಕರು ಕೂಡ ಇಲ್ಲವಾಗಿದ್ದು, ಜತೆಗೆ ಚಾಲಕ-ನಿರ್ವಾಹಕರಿಗೆ ದಿನದ ಪೂರ್ತಿ ವೇತನ ನೀಡಬೇಕಿರುವುದು ದೊಡ್ಡ ಹೊರೆಯಾಗುತ್ತಿದೆ ಎಂದು ಮಾಲಕರು ಆರೋಪಿಸುತ್ತಿದ್ದಾರೆ.

ಘನ ವಾಹನ ಸಂಚಾರ ನಿಷೇಧಗೊಂಡು ಒಂದು ತಿಂಗಳು ಹತ್ತು ದಿನ ದಾಟಿದ್ದು, ಬಸ್ಸು ಸಂಚಾರ ಅವಕಾಶ ನೀಡುವ ಕುರಿತು ಇನ್ನೂ ಕೂಡ ಸೂಕ್ತ ನಿರ್ಧಾರ ತೆಗೆದುಕೊಂಡಿಲ್ಲ. ಸೇತುವೆಯ ತಪಾಸಣೆಯ ವರದಿಯ ಕುರಿತು ಕೂಡ ಜಿಲ್ಲಾಡಳಿತ ಯಾವುದೇ ಆಲೋಚನೆ ಮಾಡುತ್ತಿಲ್ಲ. ಸೇತುವೆ ಮಧ್ಯೆ ಬಸ್ಸು ಓಡದೆ ಪ್ರಯಾಣಿಕರು ಕೈಕಂಬ-ಪೊಳಲಿ ಮಧ್ಯೆ ಆಟೋಗಳ ಮೂಲಕವೇ ಸಾಗುತ್ತಿದ್ದಾರೆ ಎನ್ನಲಾಗಿದೆ.

ಬಿ.ಸಿ. ರೋಡು-ಪೊಳಲಿ-ಕೈಕಂಬ-ಮಂಗಳೂರು, ಬಿ.ಸಿ. ರೋಡು-ಪೊಳಲಿ-ಕೈಕಂಬ-ಬಜ್ಪೆ-ಕಟೀಲು-ಕಿನ್ನಿಗೋಳಿ ರೂಟ್‌ನಲ್ಲಿ ದಿನನಿತ್ಯ ಸುಮಾರು 35 ಬಸ್ಸುಗಳು ನೂರಾರು ಟ್ರಿಪ್ ನಡೆಸುತ್ತಿದ್ದು, ಪ್ರಸ್ತುತ ಈ ಬಸ್ಸುಗಳಿಗೆ ಬರೀ ಅರ್ಥದಷ್ಟು ಟ್ರಿಪ್ ಮಾತ್ರ ಇದೆ. ಬಸ್ಸುಗಳು ಘನ ವಾಹನ ಅಲ್ಲವಾದರೂ ಸೇತುವೆಗೆ ಅಡ್ಡಲಾಗಿ ಗಾರ್ಡ್ ಅಳವಡಿಸಿರುವುದರಿಂದ ಬಸ್ಸುಗಳಿಗೆ ಸೇತುವೆ ದಾಟಲು ಸಾಧ್ಯವಾಗುತ್ತಿಲ್ಲ. ಘನ ವಾಹನಗಳು ಕೂಡ ಬಸ್ಸಿನಷ್ಟೇ ಎತ್ತರವಿರುವ ಕಾರಣ ಗಾರ್ಡ್ ತೆರವುಗೊಂಡರೆ ಬಸ್ಸಿನ ಜತೆಗೆ ಘನ ವಾಹನಗಳು ಕೂಡ ಸೇತುವೆ ದಾಟುತ್ತವೆ ಎಂಬುದು ದ.ಕ.ಜಿಲ್ಲಾಡಳಿತದ ವಾದವಾಗಿದೆ.

ಪ್ರಸ್ತುತ ಸೇತುವೆಯ ಎರಡೂ ಭಾಗದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಪೊಲೀಸ್ ಚೆಕ್‌ಪೋಸ್ಟ್ ನಿರ್ಮಿಸಿ ಗೇಟ್‌ಗಳನ್ನು ಅಳವಡಿಸಲಾಗಿದ್ದು, ಅಲ್ಲಿ ಪೊಲೀಸರನ್ನು ನಿಯೋಜಿಸಿ ಅವರ ಮೂಲಕವೇ ಘನ ವಾಹನಗಳನ್ನು ನಿಯಂತ್ರಿಸಬಹುದು. ರಾತ್ರಿ ವೇಳೆ ಪೊಲೀಸ್ ನಿಯೋಜನೆ ಸಾಧ್ಯವಾಗದೇ ಇದ್ದರೆ, ರಾತ್ರಿ ಬಸ್ಸುಗಳ ಓಡಾಟ ನಿಂತ ಬಳಿಕ ಮೇಲಿನ ಗಾರ್ಡ್ ಅಳವಡಿಸಲಿ ಎಂಬುದು ಬಸ್ಸು ಮಾಲಕರ ಸಲಹೆಯಾಗಿದೆ.

ಬಸ್ಸುಗಳು ಪ್ರಯಾಣಿಕರನ್ನು ತುಂಬಿ ಸೇತುವೆಯಲ್ಲಿ ಸಾಗುವುದು ಅಪಾಯವಾದರೆ ಸೇತುವೆಯ ಎರಡೂ ಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಸೇತುವೆ ದಾಟಿದ ಬಳಿಕ ಮತ್ತೆ ಹತ್ತಿಸಿಕೊಳ್ಳಲು ಅವಕಾಶ ನೀಡಲಿ. ಈ ಸಂದರ್ಭ ಬಸ್ಸುಗಳು ತೂಕವನ್ನು ತಗ್ಗಿಸಿಕೊಂಡು ಸೇತುವೆಗೆ ಯಾವುದೇ ರೀತಿಯ ಭಾರ ಎನಿಸುವುದಿಲ್ಲ. ಜತೆಗೆ ಬಸ್ಸುಗಳಿಗೂ ತಮ್ಮ ರೂಟ್‌ನಲ್ಲಿ ಪೂರ್ತಿ ಟ್ರಿಪ್ ಮಾಡುವುದಕ್ಕೂ ಸಾಧ್ಯವಾಗುತ್ತದೆ ಎಂದು ಬಸ್ಸು ಮಾಲಕರು ಹೇಳುತ್ತಾರೆ.

ಸಂಚಾರ ಬಂದ್ ಮಾಡುವ ಯೋಚನೆ:

ನಾವು ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಸದ್ಯದ ವ್ಯವಸ್ಥೆಯಲ್ಲಿ ನಷ್ಟದಿಂದ ಬಸ್ಸುಗಳನ್ನು ಓಡಿಸುವುದು ಅಸಾಧ್ಯವಾಗಿದ್ದು, ಹೀಗಾಗಿ ಅನಿವಾರ್ಯವಾಗಿ ಈ ತಿಂಗಳ ಅಂತ್ಯಕ್ಕೆ ಕಾನೂನು ಪ್ರಕಾರ ಟ್ಯಾಕ್ಸ್ ಸರಂಡರ್ ಮಾಡಿ ಸಂಚಾರ ಬಂದ್ ಮಾಡುವ ಯೋಚನೆಗೆ ಬಂದಿದ್ದೇವೆ. ಈಗಿನ ವ್ಯವಸ್ಥೆಯಲ್ಲಿ ಪ್ರಯಾಣಿಕರು ಕೂಡ ಬಸ್ಸನ್ನು ಅವಲಂಬಿಸದೆ ಪರ್ಯಾಯ ವ್ಯವಸ್ಥೆಯತ್ತ ಮುಖ ಮಾಡಿದ್ದು, ಎಲ್ಲಾ ಬಸ್ಸುಗಳು ನಷ್ಟದಿಂದ ಓಡುತ್ತಿವೆ ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ  ದುರ್ಗಾಪ್ರಸಾದ್ ಹೆಗ್ಡೆ ತಿಳಿಸಿದರು.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article