ಮಹಿಳೆಯರು, ಕುಣಿತ ಭಜನೆ ಬಗ್ಗೆ ಅವ ಹೇಳನಕಾರಿ ಹೇಳಿಕೆ: ವಿಟ್ಲ ಭಜನಾ ಪರಿಷತ್ ಖಂಡನೆ
ಬಂಟ್ವಾಳ: ಅರಣ್ಯಾಧಿಕಾರಿ ಸಂಜೀವ ಪೂಜಾರಿ ಹಾಗೂ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಎಂಬವರು ಮಹಿಳೆಯರು, ಭಜನೆ ಮತ್ತು ಕುಣಿತ ಭಜನೆ ಬಗ್ಗೆ ಅವ ಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ವಿಟ್ಲ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ತೀವ್ರವಾಗಿ ಖಂಡಿಸಿದೆ.
ಪರಿಷತ್ತಿನ ಅಧ್ಯಕ್ಷ ದೇವಿದಾಸ ಶೆಟ್ಟಿ ಪಾಲ್ತಾಜೆ, ಕಾರ್ಯದರ್ಶಿ ರಮೇಶ್ ರಾವ್ ಪತ್ತುಮುಡಿ ಹಾಗೂ ಕೋಶಾಧಿಕಾರಿ ಜಯರಾಮ ರೈ ಬೋಳಂತೂರು ಅವರು ಜಂಟಿ ಪತ್ರಿಕಾ ಹೇಳಿಕೆಯನ್ನು ನೀಡಿ ಜಾತಿ, ಮೇಲು, ಕೀಳು ಎಂಬ ಭೇದವಿಲ್ಲದೆ ಎಲ್ಲರೂ ಸೇರಿ ಮಾಡುವುದೇ ಭಜನೆ. ಅದೆಷ್ಟೋ ಮನೆಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ವಿವಿಧ ಶೋಭಾಯಾತ್ರೆಯ ಸಂದರ್ಭದಲ್ಲಿ ಪಾಶ್ಚಾತ್ಯ ನೃತ್ಯ, ಡಿ.ಜೆ. ಬದಲಿಗೆ ಭಜನೆ ಹಾಗೂ ಕುಣಿತ ಭಜನೆಗೆ ಜನರು ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳು ಹಾಗೂ ಯುವ ಜನಾಂಗ ಭಜನೆಯ ಬಗ್ಗೆ ಅಭಿರುಚಿ ಹೊಂದುತ್ತಿರುವುದು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಒಂದು ಒಳ್ಳೆಯ ಹೆಜ್ಜೆಯಾಗಿದೆ ಅಂಥದ್ದರಲ್ಲಿ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಹಾಗೂ ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಎಂಬವರು ಮಹಿಳೆಯರು ಭಜನೆ ಮತ್ತು ಕುಣಿತ ಭಜನೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂಬಂಧ ಪಟ್ಟ ಇಲಾಖಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.