ಹಸುರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ: ಆಲ್ವಿನ್ ಪಿಂಟೋ
ಮಂಗಳೂರು: ತಾತ್ಕಾಲಿಕ ಪಟಾಕಿ ಮಾರಾಟ ಮಾಡುವವರು ಬಹಳಷ್ಟು ಸಂಕಷ್ಟದ ನಡುವೆಯೂ ದೀಪಾವಳಿ ಸಂದರ್ಭ ವ್ಯಾಪಾರ ನಡೆಸುತ್ತಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ 13 ಸ್ಥಳಗಳಲ್ಲಿ 72 ಮಂದಿಗೆ ತಾತ್ಕಾಲಿಕ ಪರವಾನಿಗೆಯಲ್ಲಿ ಪಟಾಕಿ ಮಾರಾಟ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿದೆ. ಯಾವುದೇ ಗೊಂದಲ ಇಲ್ಲದೆ, ಮುನ್ನೆಚ್ಚರಿಕೆ ವಹಿಸಿಕೊಂಡು ಅಲ್ಲಿ ಹಸುರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಟಾಕಿ ಮಾರಾಟಗಾರರ ಸಂಘದ ಅಧ್ಯಕ್ಷ ಆಲ್ವಿನ್ ಪಿಂಟೋ ಹೇಳಿದರು.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.30, 31 ಹಾಗೂ ನ.1 ಹಾಗೂ 2ರಂದು ಹಾಗೂ ತುಳಸಿ ಪೂಜೆಯ ದಿನ ಮಾತ್ರ ತಾತ್ಕಾಲಿ ಕವಾಗಿ ಪಟಾಕಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ನೆಹರೂ ಮೈದಾನ, ಎಪಿಎಂಸಿ ಬೈಕಂಪಾಡಿ, ಉರ್ವ ಕ್ರಿಕೆಟ್ ಮೈದಾನ, ಕದ್ರಿ ಕ್ರಿಕೆಟ್ ಮೈದಾನ, ಕೃಷ್ಣಾಪುರ ಪ್ಯಾರಡೈಸ್ ಮೈದಾನ, ಅತ್ತಾವರ ನಾಯಕ್ ಮೈದಾನ, ಪದವು ಹೈಸ್ಕೂಲ್ ಮೈದಾನ, ಬೋಂದೆಲ್ ಕ್ರಿಕೆಟ್ ಮೈದಾನ, ಪಂ ಪ್‌ವೆಲ್ ಬಸ್‌ನಿಲ್ದಾಣಕ್ಕೆ ನಿಗದಿಯಾದ ಜಾಗ, ಶಕ್ತಿನಗರ ಮೈದಾನ, ಪಚ್ಚನಾಡಿ ಮೈದಾನ, ಎಮ್ಮೆಕೆರೆ ಮೈದಾನ, ಆದರ್ಶ ಯುವಕ ಮಂಡಲ ಮೈದಾನ ಗಣೇಶಪುರ ಸಹಿತ 13 ಮೈದಾನಗಳಲ್ಲಿ ಹಸಿರು ಪಟಾಕಿ ಮಾರಾಟ ಮಾಡಲು ಅನುಮತಿ ದೊರಕಿದೆ ಎಂದರು.
ಅಗ್ನಿಶಾಮಕದಳದ ಪೂರ್ಣ ಮಾರ್ಗದರ್ಶನದಲ್ಲಿ ಜಿಲ್ಲಾಡಳಿತದಿಂದ ಅನುಮತಿ ಪಡೆದು ತಾತ್ಕಾಲಿಕ ಪರವಾನಿಗೆಯಲ್ಲಿ ಪಟಾಕಿ ಮಾರಾಟ ಮಾಡಲಾಗುವುದು. ನೆಹರೂ ಮೈದಾನ ಸಹಿತ ಕೆಲವು ಕಡೆ ವ್ಯಾಪಾರಕ್ಕೆ ವಿರೋಧ ಇರುವ ಬಗ್ಗೆ ಮಾಹಿತಿ ಇದೆ. ಆದರೆ ಕ್ರೀಡಾಳುಗಳಿಗೆ ಸಮಸ್ಯೆ ಆಗದಂತೆ ಮೈದಾನದ ಬದಿಯಲ್ಲಿ ಕೇವಲ ನಾಲ್ಕು ದಿನ ಮಾತ್ರ ವ್ಯಾಪಾರ ಮಾಡಲಾಗುತ್ತದೆ. ಎಲ್ಲ ಕಡೆಯಲ್ಲಿಯೂ ಸಾರ್ವಜನಿಕರು ಸಹಕಾರ ನೀಡುವ ವಿಶ್ವಾಸ ಇದೆ ಎಂದವರು ಹೇಳಿದರು.
ಗ್ರಾಮಾಂತರದಲ್ಲಿ 112 ಮಂದಿ ಅರ್ಜಿ ಸಲ್ಲಿಸಿರುವ ಮಾಹಿತಿ ಲಭ್ಯವಿದೆ. ಒಂದು ತಾತ್ಕಾಲಿಕ ಪಟಾಕಿ ಅಂಗಡಿ ತೆರೆಯಲು ಒಂದೂವರೆ ಲಕ್ಷ ರು. ಬೇಕಾಗುತ್ತದೆ. ಅಗ್ನಿಸುರಕ್ಷೆಗೆ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡು ಪಟಾಕಿ ವ್ಯಾಪಾರ ನಡೆಸಲಾಗುತ್ತದೆ. ಹಸಿರು ಅಲ್ಲದೆ ಬೇರೆ ಪಟಾಕಿಗಳ ವ್ಯಾಪಾರ ಕಂಡುಬಂದರೆ ದೂರು ನೀಡಲಾಗುವುದು ಎಂದರು.
ಹಸಿರು ಪಟಾಕಿ ಪತ್ತೆ ಹೇಗೆ?:
ಶಿವಕಾಶಿಯಿಂದ ನೇರವಾಗಿ ಪಟಾಕಿ ತರಿಸಲಾಗುತ್ತಿದ್ದು, ಪ್ರತಿಯೊಂದು ಪಟಾಕಿಗಳಲ್ಲೂ ಹಸಿರು ಲೋಗೋ ಹಾಗೂ ಕ್ಯೂಆರ್‌ಕೋಡ್ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಿದಾಗ ಆಯಾ ಹಸಿರು ಪಟಾಕಿಯ ಬಗ್ಗೆ ಸಮಗ್ರ ವಿವರ ಸಿಗುತ್ತದೆ. ಶಿವಕಾಶಿಯಲ್ಲಿ ಸುಮಾರು 800 ಕಂಪನಿಗಳಿವೆ. ಬೇರೆ ಬೇರೆ ಕಂಪನಿಗಳ ದರ ಬೇರೆ ಇರುತ್ತದೆ. ಹಸಿರು ಪಟಾಕಿ ಪರಿಸರ ಸ್ನೇಹಿ ಆಗಿದ್ದು, ಅಷ್ಟಾಗಿ ದೊಡ್ಡ ಸದ್ದು ಮಾಡುವುದಿಲ್ಲ. 120 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಇರುವುದಿಲ್ಲ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಹಸಿರು ಪಟಾಕಿಗಳನ್ನೇ ಮಾರಾಟ ಮಾಡಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲಾ ಪಟಾಕಿ ಮಾರಾಟಗಾರರ ಸಂಘದ ಕಾರ್ಯದರ್ಶಿ ಪ್ರಕಾಶ್ ಎಂ., ಖಜಾಂಚಿ ಮಧುಸೂದನ್ ಇದ್ದರು.