ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
Saturday, October 5, 2024
ಬೆಳ್ತಂಗಡಿ: ಇಲ್ಲಿಯ ತಣ್ಣೀರು ಪಂತ ಗ್ರಾಮದ ಅಳಕೆ ಎಂಬಲ್ಲಿ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಮನೆಯಲ್ಲಿ ಶನಿವಾರ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿ ಸ್ಥಳೀಯ ನಿವಾಸಿ ರಾಜೀವ ಪೂಜಾರಿ (72) ಎಂದು ಗುರುತಿಸಲಾಗಿದೆ. ಕತ್ತಿಯಿಂದ ಕುತ್ತಿಗೆ ಕೊಯ್ದಿರುವ ರೀತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಪೂಂಜಾಲಕಟ್ಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ನಿ ನಿಧನರಾದ ಬಳಿಕ ರಾಜೀವ ಪೂಜಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಹಾಗೆ ವರ್ತಿಸುತ್ತಿದ್ದರು. ವಿಪರೀತ ಮದ್ಯ ಸೇವಿಸುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ತಂದೆ ಹಾಗೂ ಮಗ ಮಾತ್ರ ಇದ್ದರು. ಇಬ್ಬರೂ ಮದ್ಯವ್ಯಸನಿಗಳಾಗಿದ್ದರು ಎನ್ನಲಾಗಿದ್ದು, ಕೈಯಲ್ಲಿದ್ದ ಕತ್ತಿಯಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.