ಅ.25 ರಂದು 25ನೇ ವರ್ಷದ ಸಾಂಸ್ಕೃತಿಕ ಉತ್ಸವ ‘ತುಳು ಪರ್ಬ-2024’
ಮಂಗಳೂರು: ತುಳುಕೂಟ ಕುವೈಟ್ ವತಿಯಿಂದ 25ನೇ ವರ್ಷದ ಸಾಂಸ್ಕೃತಿಕ ಉತ್ಸವ ‘ತುಳು ಪರ್ಬ-2024’ ಕುವೈತ್‌ನ ಹವಾಲಿಯ ಅಮೆರಿಕನ್ ಇಂಟರ್‌ನ್ಯಾಷನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಅ.25ರಂದು ಜರಗಲಿದೆ ಎಂದು ತುಳುಕೂಟ ಕುವೈಟ್‌ನ ಅಧ್ಯಕ್ಷ ಅಬ್ದುಲ್ ರಝಾಕ್ ನಿಟ್ಟೆತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುಪರ್ಬವು ತುಳುನಾಡಿನ ಸಂಸ್ಕೃತಿಯನ್ನು ಒಳಗೊಂಡ ಕಾರ್ಯಕ್ರಮಗಳು, ಚಾಪರ್ಕ ತಂಡದ ‘ನಮಸ್ಕಾರ ಮೇಸ್ಟ್ರೆ’ ತುಳುನಾಟಕವನ್ನು ಒಳಗೊಂಡಿರುತ್ತದೆ ಎಂದವರು ತಿಳಿಸಿದರು.
2000ರಲ್ಲಿ ಆರಂಭಗೊಂಡ ತುಳುಕೂಟ ಕುವೈಟ್ ಈ ವರ್ಷ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. 4,000 ನೋಂದಾಯಿತ ಸದಸ್ಯರನ್ನೊಳಗೊಂಡಿದೆ. ಸಂಸ್ಥೆಯು ಸಾಮಾಜಿಕ ಸೇವಾ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಪ್ರಾಜೆಕ್ಟ್ ಎಜುಕೇಶನ್ ಯೋಜನೆಯಡಿ ತುಳುನಾಡಿನ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಹಣಕಾಸು ನೆರವು ಒದಗಿಸಿದೆ. ಈ ವರ್ಷ ಎಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ 17 ಸರಕಾರಿ ಶಾಲೆಗಳ 33 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ ಎಂದವರು ತಿಳಿಸಿದರು.
ಹಲವು ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ನೀಡಲಾಗಿದೆ. ಶಾಲಾ ಕಟ್ಟಡಗಳ ದುರಸ್ತಿ, ಶಾಲೆಗಳಿಗೆ ಶೌಚಾಲಯಗಳ ನಿರ್ಮಾಣ, ಕಂಪ್ಯೂಟರ್, ಪೀಠೋಪಕರಣ ಕೊಡುಗೆ ನೀಡಲಾಗಿದೆ. ಆಶ್ರಯ ಯೋಜನೆಯಡಿ ಬಡಕುಟುಂಬಗಳಿಗೆ 3 ಮನೆ ನಿರ್ಮಿಸಿಕೊಡಲಾಗಿದ್ದು ಮತ್ತೊಂದು ಮನೆ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ ಎಂದು ಅಬ್ದುಲ್ ರಝಾಕ್ ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕುವೈತ್ ಹಾಗೂ ಮಂಗಳೂರಿನಲ್ಲಿ ಆಹಾರವಸ್ತುಗಳ ಕಿಟ್ ವಿತರಣೆ, ಕುವೈತ್‌ನಲ್ಲಿ ಕಷ್ಟಕ್ಕೆ ಸಿಲುಕಿ ಊರಿಗೆ ಬರಬೇಕಿದ್ದವರಿಗೆ ಚಾರ್ಟರ್ಡ್ ವಿಮಾನದ ವ್ಯವಸ್ಥೆ ಮಾಡಿಕೊಡಲಾಗಿದೆ. ದ.ಕ, ಉಡುಪಿಯ ವಿವಿಧ ಸಂಘ ಸಂಸ್ಥೆಗಳಿಗೆ ಹಣಕಾಸು ನೆರವು ಒದಗಿಸಲಾಗಿದೆ. ತುಳುಕೂಟ ಕುವೈಟ್‌ನ ಸದಸ್ಯರಿಗೆ ಹಣಕಾಸು ನೆರವು, ವೈದ್ಯಕೀಯ ನೆರವು, ವಿದ್ಯಾರ್ಥಿವೇತನ ಮೊದಲಾದವುಗಳನ್ನು ಒದಗಿಸಲಾಗುತ್ತಿದೆ. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಆಯೋಜಿಸಿಕೊಂಡು ಬರಲಾಗಿದೆ.
ಉಡುಪಿ ಮತ್ತು ಮಂಗಳೂರಿನ ತಲಾ ಒಂದು ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಡಯಾಲಿಸಿಸ್ ಯಂತ್ರಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಳುಕೂಟ ಕುವೈಟ್‌ನ ಮಾಜಿ ಅಧ್ಯಕ್ಷ ಎ.ಕೆ.ರವೀಂದ್ರ, ಚಂದ್ರಹಾಸ ಶೆಟ್ಟಿ, ಚಾಪರ್ಕ ತಂಡದ ದೇವದಾಸ್ ಕಾಪಿಕಾಡ್, ಕಾರ್ಯಕಾರಿ ಸಮಿತಿಯ ಅರವಿಂದ ಭಂಡಾರಿ, ಎಲಿಯಾಸ್, ಮನೋಜ್ ಶೆಟ್ಟಿಕಿನ್ನಿಗೋಳಿ ಉಪಸ್ಥಿತರಿದ್ದರು.