ಅ.27ರಂದು ಹಿಂದೂಸ್ತಾನಿ ಸಂಗೀತ ದಿಗ್ಗಜರ ಸಮಾಗಮ
ಮಂಗಳೂರು: ಸಂಗೀತ ಭಾರತೀ ಪ್ರತಿಷ್ಠಾನವು ಮಂಗಳೂರಿನ ಪುರಭವನದಲ್ಲಿ ಅ. 27ರಂದು ಸಂಜೆ 5.30ರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ.
ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಬಾನ್ಸುರಿ ವಾದಕ ಪಂ. ರಾಕೇಶ್ ಚೌರಾಸಿಯ ಅವರ ಬಾನ್ಸುರಿ ವಾದನ ನಡೆಯಲಿದೆ. ಇವರಿಗೆ ಪ್ರಖ್ಯಾತ ತಾಬ್ಲಾ ಪಟು ಮುಂಬಯಿಯ ಓಜಸ್ ಅದಿಯಾ ಸಹಕಾರ ನೀಡಲಿದ್ದಾರೆ.
ಇದಾದ ಬಳಿಕ ಹೆಸರಾಂತ ಸಿತಾರ್ ವಾದಕ ಉಂದಿನ ಪಂಡಿತ್ ಪೂರ್ಬಯಾನ್ ಚಟರ್ಜಿ ಅವರ ಸೀತಾರ್ ವಾದನ ನಡೆಯಲಿದೆ. ಇವರಿಗೆ ತಬ್ಲಾದಲ್ಲಿ ಮುಂಬಯಿಯ ಪ್ರಖ್ಯಾತ ತಬ್ಲಾ ವಾದಕರಾದ ಸತ್ಯಜಿತ್ ತಲ್ವಾಕರ್ ಸಾಥ್ ನೀಡಲಿದ್ದಾರೆ.
ಈ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಕ್ಕೆ ಕೆನರಾ ಬ್ಯಾಂಕ್ ಮುಖ್ಯ ಪ್ರಯೋಜಕರಾಗಿದ್ದು, ಸಹಪ್ರಯೋಜಕರಾಗಿ ಐಡಿಯಲ್ ಐಸ್‌ಕ್ರೀಂ, ಎಂಆರ್‌ಪಿಎಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಕಾರ ನೀಡಲಿದ್ದಾರೆ.
ಇದೊಂದು ಅಪರೂಪ ಹಾಗೂ ವಿಶೇಷ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ವಿಶ್ವದ ಶ್ರೇಷ್ಠ ಸಂಗೀತ ವೇದಿಕೆಯಲ್ಲಿ ಹಾಗೂ ಸಂಗೀತ ದಿಗ್ಗಜರೊಂದಿಗೆ ನುಡಿಸಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹಿರಿಯ ಕಲಾವಿದರು ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶ ಇದ್ದು, ಸಂಗೀತಾಸಕ್ತರು, ಸಂಗೀತ ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಸಂಗೀತ ಭಾರತಿಯ ಉಪಾಧ್ಯಕ್ಷ ಪ್ರೋ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.
ರಾಕೇಶ್ ಚೌರಾಸಿಯಾ:
ರಾಕೇಶ್ ಚೌರಾಸಿಯಾ ಅವರು ದೇಶ ಕಂಡ ಸರ್ವ ಶ್ರೇಷ್ಠ ಬಾನ್ಸುರಿ ವಾದಕರಲ್ಲಿ ಓರ್ವರಾಗಿದ್ದಾರೆ. ಖ್ಯಾತ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ ಅವರ ಸೋದರಳಿಯ. 2007ರಲ್ಲಿ ಭಾರತದ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಂದ ಭಾರತೀಯ ಸಂಗೀತ ಅಕಾಡೆಮಿ ಪ್ರಶಸ್ತಿ, 2008ರಲ್ಲಿ ಆದಿತ್ಯ ಬಿರ್ಲಾ ಕಲಾಕಿರಣ ಪುರಸ್ಕಾರ ಮತ್ತು 2011ರಲ್ಲಿ ಗುರು ಶಿಷ ಪ್ರಶಸ್ತಿಯನ್ನು ಪಡೆದಿದ್ದಾರೆ. ತಮ್ಮ ಸಹಯೋಗದ ಸಂಗೀತ ಆಲ್ಬಂ ಆಸ್ ವಿ ಸ್ಪೀಕ್‌ಗಾಗಿ ಎರಡು ಗ್ರ್ಯಾಮಿ ಪ್ರಶಸ್ತಿ ದೊರೆತಿದೆ.
ಪೂರ್ಬಯನ್ ಚಟರ್ಜಿ:
ಓರ್ವ ಸರ್ವಶ್ರೇಷ್ಠ ಭಾರತೀಯ ಸಿತಾರ್ ವಾದಕರಾಗಿರುವ ಪೂರ್ಬಯನ್ ಚಟರ್ಜಿ ಅವರು, ತಂದೆ ಪಾರ್ಥಪ್ರತಿಮ್ ಚಟರ್ಜಿಯವರಿಂದ ಸಿತಾರ್ ಕಲಿತರು. 2013ರಲ್ಲಿ, ಚಟರ್ಜಿ ಅವರು ಕೋಲ್ಕತ್ತಾ ನಗರಕ್ಕಾಗಿ ತೋಮೇಕ್ ಚಾಯ್ ಬೋಲೆ ಬಂಚಿ (ನಾನು ನಿನಗಾಗಿ ಹಂಬಲಿಸುತ್ತಿರುವಂತೆ ಬದುಕುತ್ತೇನೆ) ಎಂಬ ಗೀತೆಯನ್ನು ರಚಿಸಿದರು, ಜೊತೆಗೆ ಶ್ರೀಜಾತೋ ಅವರ ಹಿಂದಿ ಮತ್ತು ಬೆಂಗಾಲಿ ಸಾಹಿತ್ಯದೊಂದಿಗೆ ಮತ್ತು ಬಿಕ್ರಮ್ ಘೋಷ್ ಅವರ ಇಂಗ್ಲಿಷ್ ಸಾಹಿತ್ಯದೊಂದಿಗೆ ರಚಿಸಿದ್ದರು.
ಈ ಮೂಲಕ ಅಧಿಕೃತ ಗೀತೆಯನ್ನು ಹೊಂದಿರುವ ನಗರ ಖ್ಯಾತಿಯನ್ನು ಪಡೆದಿದೆ. ಚಟರ್ಜಿಯವರು 15ನೇ ವಯಸ್ಸಿನಲ್ಲಿ ದೇಶದ ಅತ್ಯುತ್ತಮ ವಾದ್ಯಗಾರರಾಗಿ ಭಾರತದ ರಾಷ್ಟ್ರಪತಿ ಅವರಿಂದ ಪ್ರಶಸ್ತಿಯನ್ನು ಪಡೆದರು. ಆದಿತ್ಯ ವಿಕ್ರಮ್ ಬಿರ್ಲಾ ಪ್ರಶಸ್ತಿ, 1995ರಲ್ಲಿ ರೋಟರಿ ಇಂಟರ್ ನ್ಯಾಷನಲ್‌ನಿಂದ ರಸೋಯಿ ಪ್ರಶಸ್ತಿ ದೊರೆತಿದೆ.