
ವೆನ್‌ಲಾಕ್‌ನಲ್ಲಿ ಐಸಿಯು ಹಾಸಿಗೆ ಹೆಚ್ಚಿಸಲು ಮನವಿ
ಮಂಗಳೂರು: ಹಾಸನ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ದಲಿತ ಸಮುದಾಯ ಸೇರಿದಂತೆ ಸಾಕಷ್ಟುಸಂಖ್ಯೆಯಲ್ಲಿ ಬಡ ರೋಗಿಗಳು ವಿವಿಧ ರೀತಿಯ ತುರ್ತು ಚಿಕಿತ್ಸೆಗಾಗಿ ಬರುತ್ತಾರೆ. ಐಸಿಯುನಲ್ಲಿ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನೂ ವಾರ್ಡ್‌ನಲ್ಲಿ ದಾಖಲಿಸಲಾಗುತ್ತದೆ. ಇದರಿಂದಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದೆ ಸಾವನ್ನಪ್ಪುತ್ತಿರುವ ಪ್ರಕರಣಗಳು ನಡೆಯುತ್ತಿದ್ದು, ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ವಹಿಸಬೇಕು ಎಂದು ದಲಿತ ಮುಖಂಡ ಪ್ರೇಮನಾಥ್ ಬಳ್ಳಾಲ್‌ಬಾಗ್ ಆಗ್ರಹಿಸಿದರು.
ಡಿಸಿಪಿ ಸಿದ್ಧಾರ್ಥ ಗೋಯಲ್ ಅಧ್ಯಕ್ಷತೆಯಲ್ಲಿ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ದಲಿತ ಮುಖಂಡರು ಈ ದುಗುಡ ವ್ಯಕ್ತಪಡಿಸಿದರು.
ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದರೆ, ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸುವುದಾಗಿ ಡಿಸಿಪಿ ಸಿದ್ದಾಥ್‌ರ್ ಗೋಯಲ್ ತಿಳಿಸಿದರು.
ಉರ್ವಾಸ್ಟೋರ್‌ನ ಡಾ. ಅಂಬೇಡ್ಕರ್ ಭವನದಲ್ಲಿ ದಲಿತ ಸಮುದಾಯದವರ ಕಾರ್ಯಕ್ರಮಗಳಿಗೆ ಬುಕ್ ಮಾಡಿದರೂ ಸಭಾಂಗಣ ಲಭ್ಯವಾಗುತ್ತಿಲ್ಲ. ಸರಕಾರಿ ಕಾರ್ಯಕ್ರಮದ ಹೆಸರಿನಲ್ಲಿ ಬುಕ್ ಮಾಡಿದವರಿಗೂ ನಿರಾಕರಿಸಲಾಗುತ್ತದೆ. ದಲಿತ ಸಮುದಾಯಕ್ಕಾಗಿ ನಿರ್ಮಾಣ ಮಾಡಲಾದ ಈ ಸಭಾಂಗಣ ಅವರ ಕಾರ್ಯಕ್ರಮಗಳಿಗೆ ಸಿಗದಿದ್ದರೆ ಅದರ ಪ್ರಯೋಜನವಾದರೂ ಏನು ಎಂದು ಗಿರೀಶ್ ಕುಮಾರ್ ಸಭೆಯಲ್ಲಿ ಪ್ರಶ್ನಿಸಿದರು.
ಕುದ್ಕೋರಿ ಗುಡ್ಡೆಯಲ್ಲಿ ಕಳ್ಳನ ಹಾವಳಿ:
ಕಂಕನಾಡಿಯ ಕುದ್ಕೋರಿ ಗುಡ್ಡೆ ವ್ಯಾಪ್ತಿಯ ದಲಿತ ಕಾಲನಿಯಲ್ಲಿ ಅನಾಮಿಕನೊಬ್ಬ ಮಹಿಳೆಯರ ಒಳಉಡುಪು ಸೇರಿದಂತೆ ಇತರ ವಸ್ತುಗಳ್ನು ಕಳವು ಮಾಡಿಕೊಂಡು ಹೋಗುತ್ತಿರುವ ಪ್ರಕರಣ ನಡೆಯುತ್ತಿದೆ. ಆತನ ಕೈಯಲ್ಲಿ ಆಯುಧವೂ ಇದೆಯೆಂದು ಹೇಳಲಾಗಿದ್ದು, ಸ್ಥಳೀಯ ಯುವಕರು ಆತನನ್ನು ಹಿಡಿಯಲು ಹೊಂಚು ಹಾಕುತ್ತಿದ್ದಾರೆ. ಆದರೆ ಸಿಗುತ್ತಿಲ್ಲ. ಪೊಲೀಸರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಅನಿಲ್ ಕಂಕನಾಡಿ ಸಭೆಯಲ್ಲಿ ಆಗ್ರಹಿಸಿದರು.