ಭೂಸ್ವಾಧೀನ ಪ್ರಕ್ರಿಯೆ ವಿಳಂಬಕ್ಕೆ ಹೆದ್ದಾರಿ ಪ್ರಾಧಿಕಾರ ಕಾರಣ

ಭೂಸ್ವಾಧೀನ ಪ್ರಕ್ರಿಯೆ ವಿಳಂಬಕ್ಕೆ ಹೆದ್ದಾರಿ ಪ್ರಾಧಿಕಾರ ಕಾರಣ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ರಸ್ತೆ ಅಗಲೀಕರಣಕ್ಕಾಗಿ ಪದವು ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಕಾರಣ ಎಂದು ಭೂ ಮಾಲೀಕರ ಹೋರಾಟ ಸಮಿತಿ ಎನ್‌ಎಚ್ ೧೬೯ ಅಧ್ಯಕ್ಷೆ ಮರಿಯಮ್ಮ ಥೋಮಸ್ ದೂರಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ರಸ್ತೆ ಅಭಿವೃದ್ಧಿಗೆ ಭೂ ಮಾಲಕರು ಅಡ್ಡಿಪಡಿಸಿಲ್ಲ. ಆದರೆ, ತಮ್ಮ ಭೂಮಿಗೆ ಸರಿಯಾದ ದರ ಒದಗಿಸುವಂತೆ ಬೇಡಿಕೆ ಇಟ್ಟಿದ್ದರು. ಕಾನೂನಿನ ರೀತಿ ನಿಗದಿತ ಮೌಲ್ಯ ನೀಡಿದರೆ, ಭೂಮಿ ಬಿಟ್ಟು ಕೊಡಲು ನಾವು ತಯಾರಿದ್ದೇವೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ ಎಂದರು.

ರಾಷ್ಟ್ರೀಯ ಹೆದ್ದಾರಿ 169ರ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನಪಡಿಸುವ ಸಲುವಾಗಿ 2016 ಮತ್ತು 2019ರಲ್ಲಿ ಪ್ರಾರಂಭಿಕ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅದನ್ನು ಕಾರ್ಯಗತಗೊಳಿಸುವಲ್ಲಿ ರಾ.ಹೆ. ಪ್ರಾಧಿಕಾರ ವಿಫಲವಾಗಿದೆ. ಮಂಗಳೂರು ತಾಲೂಕು ಪದವು ಗ್ರಾಮಸೇರಿ ಒಟ್ಟು 20 ಗ್ರಾಮಗಳಲ್ಲಿ ರಾಷ್ಟ್ರೀಯ ಹೆದ್ದಾರಿ 169 ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸುವ ಸಲುವಾಗಿ ಪ್ರಾರಂಭಿಕ ಅಧಿಸೂಚನೆಯನ್ನು 2020ರ ಜ.23ರಲ್ಲಿ ಹೊರಡಿಸಲಾಗಿದೆ. ಭೂಸ್ವಾಧೀನತೆಗೆ ಒಳಪಡಿಸಲಾದ ಪದವು ಗ್ರಾಮವನ್ನು ಹೊರತುಪಡಿಸಿ ಉಳಿದ 19 ಗ್ರಾಮಗಳಲ್ಲಿ ಭೂಸ್ವಾಧೀನಗೊಂಡಿರುವ ಜಮೀನುಗಳಿಗೆ ಪರಿಹಾರ ಪಾವತಿಗೆ ಕ್ರಮಕೈಗೊಂಡು ರಸ್ತೆ ನಿರ್ಮಾಣ ಕೆಲಸ ಕಾರ್ಯಗಳು ಕಾರ್ಯಗತವಾಗಿದೆ ಎಂದು ಹೇಳಿದರು.

ಪದವು ಗ್ರಾಮದಲ್ಲಿ ಸ್ವಾಧೀನತೆಗೆ ಒಳಗೊಂಡ ಜಮೀನುಗಳಲ್ಲಿ ಯಾವುದೇ ಕೃಷಿ ಜಮೀನು ಲಭ್ಯವಿಲ್ಲದೆ ಇರುವುದರಿಂದ ಮಾರುಕಟ್ಟೆ ದರ ನಿಗದಿಪಡಿಸುವಂತೆ ಅಧಿಕಾರಿಗಳು ವರದಿ ನೀಡಿರುತ್ತಾರೆ. ವಿಶೇಷ ಭೂಸ್ವಾಧೀನ ಅಧಿಕಾರಿಗಳು ಅಂತಿಮ ಅವಾರ್ಡ್‌ನ್ನು ತಯಾರಿಸಿರುತ್ತಾರೆ. ಈ ಅವಾರ್ಡ್ ಆದೇಶವನು ಪ್ರಶ್ನಿಸಿ ಜಿಲ್ಲಾಧಿಕಾರಿಗೆ ಅರ್ಬಿಟ್ರೇಶನ್ ಅರ್ಜಿ ಸಲ್ಲಿಸಿದ್ದು ಅದನ್ನು ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದಾರೆ. 

ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಮೇಲ್ಮನವಿ ಸಲ್ಲಿಸಿರುತ್ತಾರೆ. ಆದರೆ ಜಿಲ್ಲಾ ನ್ಯಾಯಾಲಯವು ಅವಾರ್ಡ್ ಆದೇಶದಲ್ಲಿ ದಾಖಲಾದ ಭೂಮಾಲಕರೆಲ್ಲರಿಗೂ ನೋಟಿಸು ಜಾರಿಯಾಗದಿರುವುದರಿಂದ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವುದಿಲ್ಲ. 2016ರ ಮಾ.16 ರಂದು ಆರಂಭವಾದ ಭೂಸ್ವಾಧೀನ ಪ್ರಕ್ರಿಯೆಯು ಈ ವರೆಗೆ ನಿರ್ದಿಷ್ಟ ಹಂತಕ್ಕೆ ತಲುಪಲು ಸಾಧ್ಯವಾಗಿಲ್ಲ. ರಾ.ಹೆ. ಪ್ರಾಧಿಕಾರವು ಭೂಸ್ವಾಧೀನತೆಯನ್ನು ತ್ವರಿತಗತಿಯಲ್ಲಿ ಮುಗಿಸಲು ಇಚ್ಛಾಶಕ್ತಿ ವ್ಯಕ್ತಪಡಿಸದಿರುವುದು ಖೇದಕರ ಎಂದರು.

ಸಮಿತಿಯ ಪ್ರಕಾಶ್ ಚಂದ್ರ, ವಿಶ್ವಜಿತ್, ರತ್ನಾಕರ ಶೆಟ್ಟಿ, ಬ್ರಿಜೇಶ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article