ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಡಗರಶ್ರೀ ಮಂಗಳಾಂಬೆಗೆ `ನವ'ವಿಧದ ಅಲಂಕಾರ

ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಸಡಗರಶ್ರೀ ಮಂಗಳಾಂಬೆಗೆ `ನವ'ವಿಧದ ಅಲಂಕಾರ

ಮಂಗಳೂರು: ಸಾವಿರಾರು ವರ್ಷಗಳ ಇತಿಹಾಸ ಇರುವ ಮಂಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ ನವರಾತ್ರಿ ಮಹೋತ್ಸವದ ಸಂಭ್ರಮದಲ್ಲಿದೆ.
ಅ.3ರಿಂದ ಅ.14ರವರೆಗೆ ಇಲ್ಲಿ ನವರಾತ್ರಿ ಉತ್ಸವ ವಿಜೃಂಬಣೆಯಿಂದ ಜರಗಲಿದೆ.
ನವರಾತ್ರಿ ಸಂದರ್ಭದಲ್ಲಿ ದೇವರಿಗೆ 10 ದಿನಗಳಲ್ಲಿ ವಿಶೇಷ ಅಲಂಕಾರವಾಗಿ ದುರ್ಗಾದೇವಿ, ಆರ್ಯದೇವಿ, ಭಗವತಿ, ಕುಮಾರಿ, ಅಂಬಿಕೆ, ಮಹಿಷಮರ್ದಿನಿ, ಚಂಡಿಕೆ,ಸರಸ್ವತಿ ವಾಗೀಶ್ವರಿ, ಮಂಗಳಾದೇವಿಯ ಅಲಂಕಾರಗೊಳ್ಳುವುದರೊಂದಿಗೆ ಭಕ್ತಾದಿಗಳಲ್ಲಿ ಭಕ್ತಿ ಭಾವ ಸ್ಫುರಿಸುತ್ತದೆ.
ಪ್ರತಿವರ್ಷದಂತೆ ಈ ಬಾರಿಯೂ ನವರಾತ್ರಿ ಉತ್ಸವ ವಿಜೃಂಬಣೆಯಿಂದ ನಡೆಯುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳಾಗಿವೆ.
ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿತ್ಯ ಜರುಗಲಿವೆ. ಅ.14ರಂದು ಸಂಜೆ 7ಕ್ಕೆ ಅವಭೃತ ಮಂಗಳ ಸ್ನಾನದೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನಗೊಳ್ಳಲಿದೆ. ಹೆಚ್ಚಿನ ಸಂಖೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕು ಎಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಎಂ.ಅರುಣ್ ಐತಾಳ್ ತಿಳಿಸಿದ್ದಾರೆ.
ನವ ವಿಧದ ಅಲಂಕಾರ:
ನವರಾತ್ರಿ ಹಿನ್ನೆಲೆಯಲ್ಲಿ ಮಂಗಳಾದೇವಿ ದೇವಸ್ಥಾನ ಅಲಂಕಾರಗೊಳ್ಳುತ್ತಿದ್ದು, ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಉತ್ಸವದ ಆರಂಭವು ಕೊಪ್ಪರಿಗೆ ಏರಿಸುವುದರಿಂದ ಆರಂಭವಾದರೆ, ನವರಾತ್ರಿಯ ಹತ್ತು ದಿನಗಳಲ್ಲಿಯೂ ದೇವಿಯನ್ನು `ನವ' ವಿಧಗಳಲ್ಲಿ ಅಲಂಕರಿಸಿ, ಕಲ್ಪೋಕ್ತ ಪೂಜೆಗಳು ನಡೆಲಿವೆ. ಮಹಾನವಮಿಯಂದು ಚಂಡಿಕಾ ಹೋಮ, ರಂಗಪೂಜೆ ಹಾಗೂ ಸಣ್ಣ ರಥೋತ್ಸವವು ಜರಗಲಿದೆ. ವಿಜಯದಶಮಿಯ ದಿನ ಪ್ರಾತಃಕಾಲ ತೆನೆ ತೆರುವ ಉತ್ಸವವಿದೆ. ಈ ತೆನೆಯನ್ನು ದೇವಿಯ ಸನ್ನಿಧಿಯಲ್ಲಿರಿಸಿ, ಪೂಜೆ ಮಾಡಿ, ಭಕ್ತರೆಲ್ಲರೂ ತಮ್ಮ ಮನೆ ತುಂಬಿಸಿಕೊಳ್ಳುವ ಕ್ರಮವಿದೆ.
ವಿದ್ಯಾರಂಭ ಪದ್ಧತಿ ತೆನೆಯನ್ನು ಮನೆಗೆ ಕೊಂಡೊಯ್ಯುವ ದಿನ ಚಿಕ್ಕ ಮಕ್ಕಳಿಗೆ ಶ್ರೀದೇವಿಯ ಸನ್ನಿಧಿಯಲ್ಲಿ ವಿದ್ಯಾರಂಭ ಮಾಡುವ ಪದ್ಧತಿಯೂ ಇದೆ. ಈ ದಿನ ಜರುಗುವ ರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡು ರಥವನ್ನು ಶಮೀಕಟ್ಟೆಯವರೆಗೆ ಎಳೆದು ತರುವರು. ಇಲ್ಲಿ ವಿಶೇಷ ಪೂಜೆಗಳಿವೆ. ಹಿಂದೆ ಶಮೀಕಟ್ಟೆಯಲ್ಲಿ ಆಯುಧಗಳನ್ನಿರಿಸಿ ಪೂಜಿಸುವ ಕ್ರಮವಿತ್ತು. ಅಲ್ಲದೆ ರಥದ ಮುಂದೆ ಸರಕಾರಿ ಸೈನಿಕರು ಆಯುಧಗಳನ್ನು ಹಿಡಿದುಕೊಂಡು ಪಥ ಸಂಕಲನ ಮಾಡುವ ಕ್ರಮವಿತ್ತು.
ವಿವಿಧ ಕಾರ್ಯಕ್ರಮ..
ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಜೋಡಿಸಲಾಗಿದೆ. ವಿಜಯ ದಶಮಿಯಂದು ಬೆಳಿಗ್ಗೆ ತೆನೆ ಹಬ್ಬವಿರಲಿದ್ದು, 8 ಗ್ರಾಮದ ಜನರಿಗೆ ತೆನೆ ನೀಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ತದನಂತರ ತುಲಾಭಾರ ಸೇವೆ, ಮಧ್ಯಾಹ್ನ ರಥಾರೋಹಣವಾಗಿ ಸಂಜೆ ಗಂಟೆ 6ಕ್ಕೆ ಸರಿಯಾಗಿ ರಥೋತ್ಸವ ಕಾರ್ಯಕ್ರಮ ಜರಗುತ್ತದೆ.
ಕುಂಭಮಾಸ ಹುಣ್ಣಿಮೆಯಂದು ಧ್ವಜಾರೋಹಣ
ವಿಜಯದಶಮಿಯ ಮರುದಿನ ಸಾಯಂಕಾಲ ಉತ್ಸವ ಮೂರ್ತಿಯನ್ನು ಸಣ್ಣ ರಥದಲ್ಲಿರಿಸಿಕೊಂಡು, ನೇತ್ರಾವತಿ, ಫಲ್ಗುಣಿ ನದಿಗಳ ಸಂಗಮ ಸ್ಥಳ(ಉಪ್ಪಿನ ಕೋಟೆ)ದಲ್ಲಿ ಅವಭೃತ ಸ್ನಾನವಾಗಿ, ಹಿಂದುರುಗಿ ಬಂದು ನಂತರ ಮಹಾಪೂಜೆ ನಡೆಯುತ್ತದೆ. ಅನ್ನ ಸಂತರ್ಪಣೆಯೂ ಇದ್ದು, ಮಂಗಳಾದೇವಿ ದೇವಸ್ಥಾನದ ಉತ್ಸವವು ಪ್ರತೀ ವರ್ಷವೂ ವಿಜೃಂಭಣೆಯಿಂದ, ವಿವಿಧ ಆಚರಣೆಗಳೊಂದಿಗೆ ನಡೆಯುತ್ತಾ ಬಂದಿದೆ. ಇಲ್ಲಿನ  ವೈಶಿಷ್ಟವೆಂದರೆ ಕುಂಭಮಾಸ ಹುಣ್ಣಿಮೆಯಂದು ಧ್ವಜ ಏರಿಸಿ 5 ದಿನ ಜಾತ್ರೆ ಮತ್ತು ಮರುದಿನ ಪರಿವಾರ ದೈವಗಳ ನೇಮೋತ್ಸವ ಸೇವೆ ಜರಗುವುದಾಗಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article