
ಅ.3 ರಿಂದ ಸಂಪ್ಯದಲ್ಲಿ 22ನೇ ವರ್ಷದ ಪುತ್ತೂರು ದಸರಾ ಮಹೋತ್ಸವ
Tuesday, October 1, 2024
ಪುತ್ತೂರು: ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯ ನೇತೃತ್ವದಲ್ಲಿ ಪುತ್ತೂರು ತಾಲೂಕನ್ನು ಕೇಂದ್ರವಾಗಿರಸಿಕೊಂಡು ಪುತ್ತೂರು ಇತಿಹಾಸ ಪ್ರಸಿದ್ದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲೇ ಆರಂಭಗೊಂಡು ಇದೀಗ ಸಂಪ್ಯ ವಿಷ್ಣುಮೂರ್ತಿ ಅನ್ನಪೂಣೇಶ್ವರಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಗಣಪತಿ, ಶಾರದೆ, ನವದುರ್ಗೆಯರ ಸಹಿತ ಪುತ್ತೂರು ದಸರಾ ಮಹೋತ್ಸವವು ಅ.3 ರಿಂದ 14 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.
ಪುತ್ತೂರು ದಸರಾ ಮಹೋತ್ಸವ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಆರಂಭದ ದಿನದಲ್ಲಿ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ನಡೆಯುತ್ತಿದ್ದರೂ ಕ್ರಮೇಣ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ 2014ರಲ್ಲಿ ಸಂಪ್ಯ ಉದಯಗಿರಿ ಕ್ಷೇತ್ರದಲ್ಲಿ ಆರಂಭಿಸಲಾಯಿತು. ಇದೀಗ 22ನೇ ವರ್ಷದ ಪುತ್ತೂರು ದಸರಾ ಮಹೋತ್ಸವ ವೈಭವದಿಂದ ನಡೆಯಲಿದೆ. ಅ.3ಕ್ಕೆ ಗಣಪತಿ ಮತ್ತು ನವದುರ್ಗೆಯರ ಪ್ರತಿಷ್ಠೆ ನಡೆಯಲಿದೆ. ಬಳಿಕ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಅವರು ಪುತ್ತೂರು ದಸರಾವನ್ನು ಉದ್ಘಾಟಿಸಲಿದ್ದಾರೆ. ಆರ್ಯಾಪು ಗ್ರಾ.ಪಂ ಉಪಾಧ್ಯಕ್ಷ ಅಶೋಕ್ ನಾಯ್ಕ್, ಉದ್ಯಮಿ ರಮೇಶ್ ಪ್ರಭು ಉಪಸ್ಥಿತಿಯಲ್ಲಿರುತ್ತಾರೆ. ಅದೇ ದಿನ ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಸೀತಾರಾಮ ರೈ ಕೈಕಾರ, ದ್ವಾರಕ ಕನ್‌ಸ್ಟçಕ್ಷನ್‌ನ ಗೋಪಾಲಕೃಷ್ಣ ಭಟ್, ತುಡರ್ ಚಲನಚಿತ್ರದ ನಾಯಕ ನಟ ಸಿದ್ಧಾರ್ಥ್, ಆರಾಟ ಕನ್ನಡ ಚಲನಚಿತ್ರದ ಸುನೀಲ್ ನೆಲ್ಲಿಗುಡ್ಡೆ ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಅ.5ಕ್ಕೆ ಸಾಮೂಹಿಕ ಆಯುಧ ಪೂಜೆ, ಅ.9ಕ್ಕೆ ಶಾರದಾ ಪ್ರತಿಷ್ಠೆ, ಅ.14ರಂದು ಸಾಮೂಹಿಕ ಚಂಡಿಕಾಹವನ ನಡೆಯಲಿದೆ. ಅದೇ ದಿನ ಸಂಜೆ ಪುತ್ತೂರು ದಸರಾ ಮೆರವಣಿಗೆ ನಡೆಯಲಿದೆ. ಶೋಭಾಯಾತ್ರೆಯು ದರ್ಬೆ ಬೈಪಾಸ್ ರಸ್ತೆಯಿಂದ ಪೇಟೆಯಾಗಿ ಬೊಳುವಾರು ತನಕ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ ವಿವಿಧ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದವರು ಹೇಳಿದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ:
ಅ.3ರಂದು ಸಂಜೆ ಅಭಿನಯ ಆರ್ಟ್ಸ್ ಪುತ್ತೂರು ಇವರಿಂದ ಕುಸಲ್ದ ಪುಳಿಮುಂಚಿ ಮತ್ತು ಮೆಲೋಡಿಸ್ ನಡೆಯಲಿದೆ. ಅ.4ಕ್ಕೆ ಮಲ್ಲಿಕಾ ಜೆ ರೈ ಸಾರಥ್ಯದಲ್ಲಿ ಸಾಂಸ್ಕೃತಿಕ ವೈಭವ, ಅ.5ಕ್ಕೆ ವಿದುಷಿ ಸುಚಿತ್ರಾ ಹೊಳ್ಳ ಅವರ ಶಿಷ್ಯರಿಂದ ಶಾಸ್ತ್ರೀಯ ಸಂಗೀತ, ಅ.6ಕ್ಕೆ ಕೃಷ್ಣಾ ಕಲಾಕೇಂದ್ರ ವೀರಮಂಗಲದಿಂದ ತುಳು ನೃತ್ಯರೂಪಕ, ಅ.7ಕ್ಕೆ ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಇವರಿಂದ ತಾಳಮದ್ದಳೆ, ಅ.8ಕ್ಕೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ನೃತ್ಯಾರ್ಪಣ, ಅ.9ಕ್ಕೆ ವಿದುಷಿ ವೀಣಾ ರಾಘವೇಂದ್ರ ಅವರ ಶಿಷ್ಯರಿಂದ ಶಾಸ್ತ್ರೀಯ ಸಂಗೀತ ಕಚೇರಿ, ಅ.10ಕ್ಕೆ ಶಶಿ ಸಂಪ್ಯ ಕುಸಾಲ್ದ ಮಸಾಲೆಗಳು, ಹಾಡು, ನೃತ್ಯವೈಭವ, ಅ.11ಕ್ಕೆ ವಿಶ್ವಕಲಾನಿಕೇತನ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್ ಮತ್ತು ಕಲ್ಚರಲ್ ಇವರಿಂದ ನೃತ್ಯ ವೈಭವ, ಅ.12ಕ್ಕೆ ಡಾ.ಕಿರಣ್ ಕುಮಾರ್ ಗಾನಸಿರಿ ಸಾರಥ್ಯದಿಂದ ಸುಮಧುರ ಸಂಗೀತ ಲಹರಿ, ಅ.13ಕ್ಕೆ ಊರ ಕಲಾವಿದರಿಂದ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ ಎಂದು ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ ಉರ್ಲಾಂಡಿಯವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿ ಕಾಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಪ್ರಧಾನ ಕಾರ್ಯದರ್ಶಿ ನೇಮಾಕ್ಷ ಸುವರ್ಣ, ಉಪಾಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಉಪಸ್ಥಿತರಿದ್ದರು.