
ಮಂಗಳೂರು ನಗರದಲ್ಲೂ ಅಕ್ರಮ ಬಾಂಗ್ಲಾ ನಿವಾಸಿಗಳು ನೆಲೆಸಿರು ಶಂಕೆ
ಮಂಗಳೂರು: ಮಲ್ಪೆಯಲ್ಲಿ ಇತ್ತೀಚೆಗೆ ಬಿಹಾರಿಗಳೆಂದು ಹೇಳಿಕೊಂಡು ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶಿಯರ ಪತ್ತೆ ನಡೆದಿರುವಂತೆಯೇ ಮಂಗಳೂರು ನಗರದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳು ನೆಲೆಸಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಪತ್ತೆ ಕಾರ್ಯ ನಡೆಸುವ ಅಗತ್ಯ ಇದೆ ಎಂದು ದಲಿತ ಮುಖಂಡರು ಕುಂದುಕೊರತೆ ಸಭೆಯಲ್ಲಿ ಆತಂಕ ವ್ಯಕ್ತ ಪಡಿಸಿದ ವಿದ್ಯಮಾನ ನಡೆದಿದೆ.
ಡಿಸಿಪಿ ಸಿದ್ಧಾರ್ಥ ಗೋಯಲ್ ಅಧ್ಯಕ್ಷತೆಯಲ್ಲಿ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ದಲಿತ ಮುಖಂಡರು ತಿಳಿಸಿದರು.
ದಲಿತ ಮುಖಂಡ ಸದಾಶಿವ ಉರ್ವಾಸ್ಟೋರ್ ವಿಷಯ ಪ್ರಸ್ತಾಪಿಸಿ, ಮಂಗಳೂರು ನಗರಕ್ಕೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕೂಲಿ ಕಾ ರ್ಮಿಕರಾಗಿ ಬರುತ್ತಿದ್ದಾರೆ. ಹೆಚ್ಚಿನವರು ಬಿಹಾರ, ಅಸ್ಸಾಂನವರು ಎಂದು ಹೇಳುತ್ತಾರೆ. ಅವರಲ್ಲಿ ಪಶ್ಚಿಮ ಬಂಗಾಳದ ಗಡಿ ಭಾಗದಿಂದ ಬಾಂಗ್ಲಾ ಅಥವಾ ಇತರ ದೇಶಗಳಿಂದ ಬಂದಿರುವ ಶಂಕೆಯೂ ಇದೆ. ಈ ಕಾರ್ಮಿಕರನ್ನು ಕರೆತರಲು ಏಜೆಂಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಸಿ ಕರೆತರಲಾಗುತ್ತದೆ. ಅವರಿಗೆ ಶೆಡ್ ನಿರ್ಮಿಸಿ ಕೂಡಾ ಕೊಡುತ್ತಾರೆ. ಮುಂದೆ ಏನಾದರೂ ಅಹಿತಕರ ಘಟನೆ ನಡೆದರೆ ನಗರಕ್ಕೆ ಕೆಟ್ಟಹೆಸರು ಬರಲಿದೆ. ಪೊಲೀಸರು ವಿವಿಧ ಟೆಂಟ್, ಗೋದಾಮುಗಳಲ್ಲಿ ಬೀಡು ಬಿಟ್ಟಿರುವ ಕೂಲಿ ಕಾರ್ಮಿಕರ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬೆಲೂನ್ ಮಾರಾಟ ಮಾಡುವವವರು, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರ ಬಗ್ಗೆ ಆಗಾಗ ತಪಾಸಣೆ ಕಾರ್ಯ ನಡೆಯುತ್ತಿದೆ. ಮಾತ್ರವಲ್ಲದೆ ಅಂತಹ ಕಾರ್ಮಿಕರ ಬೆರಳಚ್ಚು ಸ್ಕ್ಯಾನಿಂಗ್ ಮಾಡುವ ಕಾರ್ಯವೂ ನಡೆಯುತ್ತಿದೆ ಎಂದು ಡಿಸಿಪಿ ಸಿದ್ಧಾರ್ಥ ಗೋಯಲ್ ಹೇಳಿದರು.
ನಗರ ವಾಸಿಗಳು ಯಾರಿಗಾದರೂ ಮನೆ, ಕಟ್ಟಡ ಸೇರಿದಂತೆ ಬಾಡಿಗೆ ನೀಡುವ ಸಂದರ್ಭ ಪೊಲೀಸ್ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಈ ಮೂಲಕ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಪತ್ರ:
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಕೇಸ್ ಹೊಂದಿರುವ ವ್ಯಕ್ತಿಗೆ ಪಾಸ್‌ಪೋರ್ಟ್‌ಗೆ ಪೊಲೀಸ್ ಕ್ಲಿಯರೆನ್ಸ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಾದೇಶಿಕ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದು ಡಿಸಿಪಿ ಸಿದ್ಧಾರ್ಥ ಗೋಯಲ್ ಸಭೆಯ ಬಳಿಕ ಸುದ್ದಿಗಾರರಲ್ಲಿ ತಿಳಿಸಿದರು.
ಪೊಲೀಸ್ ತಪಾಸಣೆ ವೇಳೆ ಅರ್ಜಿದಾರನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾದ ಬಗ್ಗೆ ಮಾಹಿತಿ ಅಪ್‌ಡೇಟ್ ಆಗಿರಲಿಲ್ಲ. ಹಾಗಾಗಿ ನಿರಕ್ಷೇಪಣಾ ಪತ್ರ ನೀಡುವಾಗ ಕ್ರಿಮಿನಲ್ ಕೇಸ್‌ನ ಮಾಹಿತಿ ಬಂದಿರಲಿಲ್ಲ. ಬಳಿಕ ಕ್ರಿಮಿನಲ್ ಕೇಸು ಇರುವ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ದಾಖಲೆ ಸಹಿತ ಮಾಹಿತಿ ನೀಡಲಾಗಿದೆ ಎಂದು ಡಿಸಿಸಿ ಸಿದ್ಧಾರ್ಥ ಗೋಯಲ್ ಸ್ಪಷ್ಟಪಡಿಸಿದರು.