ಎಡಪಂಥೀಯ ವಿಚಾರಧಾರೆಯಿಂದ ಮಾತ್ರವೇ ದೇಶ ಉಳಿಸಲು ಸಾಧ್ಯ: ಜೆ. ಬಾಲಕೃಷ್ಣ ಶೆಟ್ಟಿ
ಮಂಗಳೂರು: ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶ ಹಾಗೂ ಅಲ್ಲಿನ ಜನತೆಯ ಬದುಕನ್ನು ರಕ್ಷಿಸಲು ಸಾಧ್ಯ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಇಂದು ಬಿ.ಸಿ.ರೋಡ್‌ನ ರಿಕ್ಷಾ ಭವನದಲ್ಲಿ ಕಾಂ.ಸೀತಾರಾಮ ಯೆಚೂರಿ ವೇದಿಕೆಯಲ್ಲಿ ಜರುಗಿದ ಸಿಪಿಐಎಂ 24ನೇ ಬಂಟ್ವಾಳ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಅಮೇರಿಕನ್ ಸಾಮ್ರಾಜ್ಯಶಾಹಿಗಳ ನೇತ್ರತ್ವದಲ್ಲಿ ಇಡೀ ವಿಶ್ವವನ್ನು ತನ್ನ ಕಪಿಮುಷ್ಠಿಯಲ್ಲಿರಿಸಲು ಜಾಗತಿಕ ಬಂಡವಾಳಶಾಹಿಗಳು ನಡೆಸುವ ಪಿತೂರಿಯಿಂದ ಜಗತ್ತಿನ ಸಾಮಾನ್ಯ ಜನತೆ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಇವರ ಲಾಭಕೋರತನದಿಂದಾಗಿ ಬಡವರು, ದುಡಿಯುವ ವರ್ಗ, ಶೋಷಿತ ಜನತೆಯ ಬದುಕು ಸರ್ವನಾಶವಾಗುತ್ತಿದೆ. ಮಾತ್ರವಲ್ಲದೆ ಬಲಪಂಥೀಯ ಶಕ್ತಿಗಳು ತನ್ನ ಮೂಲ ಅಜೆಂಡಾವನ್ನು ಬಿಚ್ಚಿಡುತ್ತಿದ್ದು ಜಗತ್ತಿನೆಲ್ಲೆಡೆ ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ.ಇದರಿಂದಾಗಿ ದೇಶ ಮಾತ್ರವಲ್ಲ ದೇಶದ ಸಾಮಾನ್ಯ ಜನತೆಯ ಪ್ರಾಣವೂ ಕೂಡ ಅಪಾಯದಲ್ಲಿದೆ. ಇವೆಲ್ಲದಕ್ಕೂ ಎದುರಾಗಿ ಜಗತ್ತಿನಲ್ಲಿ ಎಡಪಂಥೀಯ ವಿಚಾರಧಾರೆಗಳು ಬಲಗೊಳ್ಳುತ್ತಿದ್ದು ಬಂಡವಾಳ ಶಾಹಿಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದೆ ಎಂದರು.
ಸಮ್ಮೇಳನಕ್ಕೆ ಮಾರ್ಗದರ್ಶಕರಾಗಿ ಆಗಮಿಸಿದ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸದಾಶಿವದಾಸ್ ಅವರು ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರಕಾರ ಕಳೆದ 10 ವರ್ಷಗಳಲ್ಲಿ ದೇಶದ ಅರ್ಥ ವ್ಯವಸ್ಥೆಯನ್ನೇ ನಾಶ ಪಡಿಸಿ ಇಲ್ಲಿನ ಜನತೆಯ ಬದುಕನ್ನು ಸಂಕಷ್ಟಮಯಗೊಳಿಸಿದ್ದಾರೆ. ಹಾಗೂ ದೇಶದ ಸಂಪತ್ತನ್ನು ಅಂಬಾನಿ ಅಧಾನಿ ಸೇರಿದಂತೆ ಕಾರ್ಪೊರೇಟ್ ಕಂಪೆನಿಗಳಿಗೆ ಮಾತ್ರವೇ ಮಾರಾಟ ಮಾಡುವ ಮೂಲಕ ದೇಶವನ್ನು ಅಡವಿಟ್ಟಿದ್ದಾರೆ. ಇಂತಹ ಧೂರ್ತ ಸರಕಾರದ ವಿರುದ್ಧ ದುಡಿಯುವ ಜನತೆಯ ಹೋರಾಟ ಬಲಗೊಳ್ಳಬೇಕೆಂದು ಹೇಳಿದರು.
ಉದ್ಘಾಟನಾ ಸಮಾರಂಭದ ಬಳಿಕ ಜರುಗಿದ ಪ್ರತಿನಿಧಿ ಅಧಿವೇಶನದ ಅಧ್ಯಕ್ಷತೆಯನ್ನು ಸಿಪಿಐಎಂನ ಮುಖಂಡ ಉದಯ ಕುಮಾರ್ ವಹಿಸಿ ಮಾತನಾಡಿದರು.
ಕಳೆದ 3 ವರ್ಷಗಳ ಕರಡು ವರದಿಯನ್ನು ಸಿಪಿಐಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಂಡಿಸಿ, ಅಂತರಾಷ್ಟ್ರೀಯ ರಾಷ್ಟ್ರೀಯ ರಾಜ್ಯ ಹಾಗೂ ಜಿಲ್ಲೆಯ ಪರಿಸ್ಥಿತಿಗಳ ಬಗ್ಗೆ ಬೆಳಕು ಚೆಲ್ಲುತ್ತಾ ಭವಿಷ್ಯದ ಬಂಟ್ವಾಳದಲ್ಲಿ ಕಮ್ಯುನಿಸ್ಟ್ ಚಳುವಳಿಯ ಅಗತ್ಯತೆಯನ್ನು ಹಾಗೂ ಅದನ್ನು ಬೆಳೆಸುವ ಬಗ್ಗೆ ಮಾರ್ಗದರ್ಶನವನ್ನು ನೀಡಿದರು.
ಶಿಕ್ಷಣ ಆರೋಗ್ಯ ಉದ್ಯೋಗ ಮನೆ ನಿವೇಶನಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಂಡ ಸಮ್ಮೇಳನವು ಮುಂಬರುವ ದಿನಗಳಲ್ಲಿ ಬಲಿಷ್ಠ ಸಂಘಟನೆಯನ್ನು ಕಟ್ಟಲು ಪ್ರತಿಜ್ಞೆ ಸ್ವೀಕರಿಸಿತು. ಬಳಿಕ ಸಮ್ಮೇಳನವು ನೂತನ ಬಂಟ್ವಾಳ ತಾಲೂಕು ಸಂಘಟನಾ ಕಾರ್ಯದರ್ಶಿಯನ್ನಾಗಿ ಕಾಂ. ಚಂದ್ರ ಪೂಜಾರಿ ಬೋಳಂತೂರು ಅವರನ್ನು ಸರ್ವಾನುಮತದಿಂದ ಆಯ್ಕೆಗೊಳಿಸಿತು. ಹಾಗೂ ನವೆಂಬರ್ ತಿಂಗಳಲ್ಲಿ ಮಂಗಳೂರಿನಲ್ಲಿ ಜರುಗಲಿರುವ ದ.ಕ. ಜಿಲ್ಲಾ ಸಮ್ಮೇಳನಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.


