ದಸರಾ ಬೊಂಬೆ ಪ್ರದರ್ಶನದ ಮೂಲಕ ನಮ್ಮ ಸಂಸ್ಕೃತಿ ಪರಿಚಯ: ಪೇಜಾವರ ಸ್ವಾಮೀಜಿ
ಮಂಗಳೂರು: ದಸರಾ ಬೊಂಬೆ ಪ್ರದರ್ಶನದ ಮೂಲಕ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ದಸರಾ ಸಂದರ್ಭದಲ್ಲಿ ನಡೆಯುತ್ತದೆ. ಹೊರ ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ಈ ಸಂಪ್ರದಾಯವನ್ನು ನಮ್ಮ ಭಾಗದಲ್ಲಿಯೂ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯರ ಷಷ್ಟ್ಯಬ್ಧ ಪೂರ್ತಿ ಸರಣಿ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಕದ್ರಿಯ ಮಂಜುಪ್ರಾಸಾದದಲ್ಲಿ ದಸರಾ ಬೊಂಬೆ ಪ್ರದರ್ಶನ ಮತ್ತು ಪಾರಂಪರಿಕ ವಸ್ತುಗಳ ಪ್ರದರ್ಶನ ಅನಾವರಣಗೊಳಿಸಿ ಅವರು ಮಾತನಾಡಿದರು.
ನಾಡಿನಲ್ಲಿ ದಸರಾ ಉತ್ಸವ ಆರಂಭವಾಗಿದೆ. ದುಷ್ಟರ ಸಂಹಾರದ ಮೂಲಕ ಭೂಮಿಯಲ್ಲಿ ಶಾಂತಿ ನೆಲೆಸುವಂತೆ ತಾಯಿ ದುರ್ಗಾದೇವಿ ಮಾಡಿದ್ದಾಳೆ. ದಸರೆಯ ಈ ಸಂದರ್ಭದಲ್ಲಿ ಮಹಾ ತಾಯಿಯ ಆರಾಧನೆ ಮಾಡುವ ಮೂಲಕ ಆಕೆಯ ಕೃಪೆಗೆ ಪಾತ್ರರಾಗೋಣ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಹಳೆ ಮೈಸೂರು ಪ್ರದೇಶ, ಉತ್ತರ ಭಾರತದಲ್ಲಿ ಬೊಂಬೆ ಪ್ರದರ್ಶನದಲ್ಲಿ ಹೆಚ್ಚು ಪ್ರಚಲಿತದಲಿ ದ್ದು, ಪ್ರಾದೇಶಿಕವಾಗಿ ಸಂಪ್ರದಾಯವೂ ವಿಭಿನ್ನವಾಗಿದೆ. ಬೊಂಬೆಗಳ ಜತೆಗೆ ನಮ್ಮ ಪಾರಂಪರಿಕ ವಸ್ತುಗಳನ್ನು ಇರಿಸಲಾಗಿದ್ದು, ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಪ್ರಮುಖರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪೊಳಲಿ ನಿತ್ಯಾನಂದ ಕಾರಂತ, ಜನಾರ್ದನ ಹಂದೆ, ಸುಧಾಕರ ರಾವ್ ಪೇಜಾವರ, ಪ್ರಭಾಕರ ರಾವ್ ಪೇಜಾವರ, ಪೂರ್ಣಿಮಾ ರಾವ್ ಪೇಜಾವರ, ಸುಬ್ರಹ್ಮಣ್ಯ ಬೆಂಗಳೂರು ಮತ್ತಿತರರಿದ್ದರು.
ಅಕ್ಟೋಬರ್ 12 ವಿಜಯದಶಮಿಯಂದು ವಿದ್ಯಾದಶಮಿ ನಡೆಯಲಿದೆ. ಈ ಗೊಂಬೆ ಪ್ರದರ್ಶನ ಅಕ್ಟೋಬೂರ್ 12ರ ವರೆಗೆ ಇರಲಿದೆ.

