ಮೈಸೂರು ದಸರಾಕ್ಕೂ ಪೈಪೋಟಿ ನೀಡಲಿದೆ ನಮ್ಮೂರ ದಸರಾ...!
Thursday, October 3, 2024
ದಸರಾ ಎಂದ ಕ್ಷಣ ನಮಗೆಲ್ಲರಿಗೂ ನೆನಪಾಗುವುದು ಮೈಸೂರು ದಸರಾ. ಮೈಸೂರು ದಸರಾ ಕರ್ನಾಟಕ ರಾಜ್ಯದ ನಾಡ ಹಬ್ಬವಾಗಿದೆ ಪ್ರತಿ ವರ್ಷವೂ ಈ ಹಬ್ಬವನ್ನು ಮೈಸೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹಿಂದಿನ ಕಾಲದಿಂದಲೂ ನಡೆದು ಬಂದ ಈ ಹಬ್ಬ ಹಲವು ರೀತಿಯ ಸಂಪ್ರದಾಯ ಮತ್ತು ನೀತಿ ನಿಯಮಗಳಿಗೆ ಅನುಸಾರವಾಗಿ ಆಚರಿಸುತ್ತಿರುವುದು ಇಂದಿಗೂ ವಿಶೇಷ.
ವಿಜಯದಶಮಿ ಎನ್ನುವುದು ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಆಚರಿಸುವ ಹಬ್ಬವಾಗಿದೆ. ದೇವಿ ಚಾಮುಂಡೇಶ್ವರಿ ರಾಕ್ಷಸ ಮಹಿಷಾಸುರನನ್ನು ಕೊಂದ ದಿನವನ್ನು ದಸರಾ ಹಬ್ಬವಾಗಿ ಆಚರಿಸಲಾಗುತ್ತದೆ
ಮೈಸೂರು ಮಾತ್ರವಲ್ಲದೆ ರಾಜ್ಯದ ವಿವಿದೆಡೆ ದಸರಾ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗೆಯೇ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನನಲ್ಲೂ ಕೂಡ ಈ ಹಬ್ಬವನ್ನು ಒಂಬತ್ತು ದಿನಗಳ ವರೆಗೂ ವರ್ಣರಂಜಿತಾ ಬೆಳಕುಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ನವರಾತ್ರಿಯ ಮೊದಲನೇ ದಿನ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ಒಂಬತ್ತು ದಿನಗಳ ವರೆಗೂ ದೇವಿಗೆ ಒಂದೊಂದು ರೀತಿಯ ಅವತಾರದ ಅಲಂಕಾರ ಮಾಡಲಾಗುತ್ತದೆ.
ದೇವಿಯ ಒಂಬತ್ತು ಅವತಾರದ ಅಲಂಕಾರಗಳು:
ಮೊದಲನೇ ದಿನ ಶೈಲ ಪುತ್ರಿ, ಎರೆಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ, ನಾಲ್ಕನೇ ದಿನ ಕೂಷ್ಮಾಂಡ ದೇವಿ, ಐದನೇ ದಿನ ಸ್ಕಂದ ಮಾತಾ, ಆರನೇ ದಿನ ಕ್ಯಾತ್ಯಾಯನಿ, ಏಳನೇ ದಿನ ಕಾಳರಾತ್ರಿ, ಎಂಟನೇ ದಿನ ಮಹಾಗೌರಿ, ಒಂಬತ್ತನೇ ದಿನ ಸಿದ್ದಿದಾತ್ರಿ ಹಾಗೂ ಇದೆ ದಿನವನ್ನು ದಶಮಿ ಎಂದು ಆಚರಿಸಲಾಗುತ್ತದೆ. ದೇವಿಯ ಒಂಬತ್ತು ಅವತಾರದ ಅಲಂಕಾರವನ್ನು ನೋಡಲು ಜನ ಸಾಗರವೇ ಹರಿದು ಬರುತ್ತದೆ. ದೇವಿಯ ದರ್ಶನ ಪಡೆದು ಹಣ್ಣು ಕಾಯಿ ಸಲ್ಲಿಸಿ ಪ್ರಸಾದ ಸ್ವೀಕರಿಸಿ ದೇವಿಯ ಆಶೀರ್ವಾದ ಪಡೆದು ವರ್ಣರಂಜಿತಾ ತೆಗಿಸಿಕೊಂಡು ಹೋಗುತ್ತಾರೆ.
ನವರಾತ್ರಿಯ ಒಂಬತ್ತು ದಿನಗಳ ವರೆಗೂ ಪ್ರತಿನಿತ್ಯವು ಒಂದೊಂದು ರೀತಿಯ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ. ಸಂಗೀತ ಕಾರ್ಯಕ್ರಮ, ನೃತ್ಯ, ದಸರಾ ಹಬ್ಬದ ಇತಿಹಾಸದ ನಾಟಕ, ಚಾಮುಂಡೇಶ್ವರಿ ದೇವಿಯ ಮಹಿಮೆ ಹೀಗೆ ಹಲವು ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಒಂದು ಜಾತ್ರೆಯ ಹಾಗೆ ನಡೆಯುವ ಈ ಹಬ್ಬ ಮಕ್ಕಳಿಗಂತೂ ಸಂತೋಷದ ದಿನಗಳಾಗಿರುತ್ತದೆ. ಹೀಗೆ ಒಂಬತ್ತು ದಿನಗಳ ಪೂಜೆ ಕಾರ್ಯಕ್ರಮಗಳ ನಂತರ, ಕೊನೆಯ ದಿನ ಚಾಮುಂಡೇಶ್ವರಿ ದೇವಿಯನ್ನು ಸಂಗೀತ ವಾದ್ಯಗಳು, ಹಲವು ವೇಷ ಭೂಷಣಗಳು, ಭಜನೆ, ನೃತ್ಯ ಮತ್ತು ಕುಣಿತಗಳೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ಸಂದರ್ಭದಲ್ಲಿ ಮನೆ ಮನೆಗೂ ಹಣ್ಣು ಕಾಯಿ ಪ್ರಸಾದಗಳ ವಿನಿಯೋಗ ಮಾಡಲಾಗುತ್ತದೆ. ಎಲ್ಲ ಕಾರ್ಯಕ್ರಮಗಳ ನಂತರ ದೇವಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದು ಇಲ್ಲಿಯ ವಾಡಿಕೆ.
-ಸೃಷ್ಟಿ
ಪತ್ರಿಕೋದ್ಯಮ ವಿದ್ಯಾರ್ಥಿನಿ
ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು.
