ಅಡಿಕೆ ಆಮದು-ಕೇಂದ್ರ ಇಲಾಖೆ ಜತೆಗೆ ಚರ್ಚೆ: ಕ್ಯಾ. ಚೌಟ
Saturday, October 5, 2024
ಪುತ್ತೂರು: ವಿದೇಶದಿಂದ ಅಡಕೆ ಆಮದು ಮಾಡುವುದರಿಂದ ನಮ್ಮ ಅಡಕೆ ಮಾರುಕಟ್ಟೆ ಮೇಲಾಗುವ ಪರಿಣಾಮದ ಬಗ್ಗೆ ಕ್ಯಾಂಪ್ಕೋ ಜತೆ ಸೇರಿಕೊಂಡು ಕೇಂದ್ರದ ಸಂಬಂಧಪಟ್ಟ ಇಲಾಖೆಗಳ ಜತೆ ಚರ್ಚಿಸಲಾಗುವುದು. ಬೆಳೆಗಾರರಿಗೆ ಸಮಸ್ಯೆಯಾಗದಂತೆ ನಾನು ರೈತ ಜತೆಗಿದ್ದೇನೆ. ಆಮದು ಕಾರಣದಿಂದ ಅಡಕೆ ಧಾರಣೆ ಇಳಿಯಲಿದೆ ಎಂದು ಶಾಸಕ ಅಶೋಕ್ ರೈ ಅವರು ಯಾವ ಮಾನದಂಡದಿಂದ ಹೇಳಿದರೋ ಗೊತ್ತಿಲ್ಲ ಎಂದರು. ಅಡಕೆಯ ಹಳದಿ ರೋಗ, ಎಲೆಚುಕ್ಕಿ ರೋಗಕ್ಕೆ ಇದುವರೆಗೆ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ ನಿಜ. ಈ ನಿಟ್ಟಿನಲ್ಲಿ ಜಂಟಿ ಅಧ್ಯಯನ ನಡೆಯಬೇಕಿದೆ. ರಾಜ್ಯ ಸರ್ಕಾರ ಸಂತ್ರಸ್ತ ಅಡಕೆ ಬೆಳೆಗಾರರಿಗೆ ಪರಿಹಾರ ನೀಡುವ ಬಗ್ಗೆ ಯೋಚಿಸಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸುದ್ದಿಗೋಷ್ಠಿಯಲ್ಲಿ ಇಂದು ಆಗ್ರಹಿಸಿದರು.
ಕಬಕ-ಪುತ್ತೂರು ರೈಲು ನಿಲ್ದಾಣದ ಆವಶ್ಯಕತೆಗಳ ಬಗ್ಗೆ ವರದಿ ತರಿಸಿಕೊಂಡು ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಮೊದಲ ಹಂತದ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.50 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿದೆ. ಸಾಮೂಹಿಕ ಅಭಿಯಾನ ಮುಗಿದಾಗ ಜಿಲ್ಲೆಯಲ್ಲಿ 3.50 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಕಾರ್ಯಕರ್ತರು, ನಾಯಕರು ಎಂಬ ಭೇದವಿಲ್ಲದೆ ಎಲ್ಲರೂ ಈ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಕಲ್ಲಿಮಾರ್, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು.