ಹೋಂಸ್ಟೇ ಹೆಸರಿನಲ್ಲಿ ಅನೈತಿಕ ಚಟುವಟಿಕೆ: ಗ್ರಾಮಸ್ಥರ ವಿರೋಧ
ಉಡುಪಿ: ಮಲ್ಪೆ, ಪಡುಕೆರೆ, ಕಾಪು ಕಡಲ ತೀರದಲ್ಲಿ ಹೋಂಸ್ಟೇ ರೆಸಾರ್ಟ್‌ಗಳಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳು ಊರಿನ ಪರಂಪರೆಗೆ, ಭಜನಾ ಮಂದಿರಗಳ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಅದರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಭಾನುವಾರ ನಡೆದ ವಿಶೇಷ ಸಭೆಯಲ್ಲಿ ಸ್ಥಳೀಯರು ಒಕ್ಕೊರಲಿನಿಂದ ವಿರೋಧಿಸಿಮ ಅನಾದಿ ಕಾಲದಿಂದ ಮೀನುಗಾರಿಕೆಯನ್ನೇ ನಂಬಿ ಭಜನಾ ಮಂದಿರಗಳ ಧಾರ್ಮಿಕ ನೆರಳಲ್ಲಿ ಬದುಕು ಕಟ್ಟಿಕೊಂಡಿರುವ ಅಪೂರ್ವ ಸಂಸ್ಕೃತಿಯ ಊರು ನಮ್ಮದು. ಇತ್ತೀಚಿನ ಕೆಲವು ವರ್ಷಗಳಿಂದ ಹೋಂಸ್ಟೇ, ರೆಸಾರ್ಟ್‌ಗಳಿಗೆ ಬರುವ ಪ್ರವಾಸಿಗರಿಂದಾಗಿ ನಮ್ಮ ಪರಂಪರೆಗೆ ಅಪಾರವಾದ ಹಾನಿಯಾಗುತ್ತಿದೆ.
ಇದು ಮುಂದುವರಿದರೆ ಕೇರಳದ ವಯನಾಡಿನಂತೆ ಊರು ಸರ್ವ ನಾಶವಾಗುವುದು ಖಂಡಿತ. ಈ ಬಗ್ಗೆ ಸಂಬಂಧಿತರಿಗೆ ಮನ, ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಯ ಎಚ್ಚರಿಕೆ ಕ್ರಮವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಎಲ್ಲಾ ಭಜನಾ ಮಂದಿರಗಳವರೂ ಒಟ್ಟು ಸೇರಿ ಮನವಿ ನೀಡಲಾಗುತ್ತಿದ್ದು, ಅದಕ್ಕೆ ಸೂಕ್ತ ಪ್ರತಿಕ್ರಿಯೆ ಲಭಿಸದೇ ಹೋದಲ್ಲಿ ಬೃಹತ್ ಪ್ರತಿಭಟನೆಗೆ ಸಿದ್ಧರಾಗೋಣ. ಸಾವಿರಾರು ಕೋಟಿ ರೂಪಾಯಿಗಳ ಮರೀನಾದಂಥ ಬೃಹತ್ ಯೋಜನೆಯನ್ನೇ ಓಡಿಸಿದವರಿಗೆ ಇದು ಅಸಾಧ್ಯದ ಸಂಗತಿಯಲ್ಲ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಮಲ್ಪೆ ಪಡುಕರೆಯಿಂದ ಕಾಪು ವರೆಗಿನ ಎಲ್ಲಾ ಭಜನಾ ಮಂದಿರಗಳ ಸಹಿತ ಒಟ್ಟು 35 ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಾತೃಮಂಡಳಿಗಳ ಸದಸ್ಯರು ಹಾಗೂ ಊರ ನಾಗರಿಕರು ಭಾಗವಹಿಸಿದ್ದರು. ಪ್ರಮುಖವಾಗಿ ಸತ್ಯಾನಂದ ಭಜನಾ ಮಂದಿರದ ಗೋಪಾಲ ಮೆಂಡನ್, ಶ್ರೀದೇವಿ ಭಜನಾ ಮಂದಿರದ ಗಿರೀಶ್ ಕುಂದರ್, ಮೀನುಗಾರ ಸಂಘದ ಜಗನ್ನಾಥ ಅಮೀನ್, ಅಶೋಕ್ ತಿಂಗಳಾಯ ಮೊದಲಾದವರು ಸಭೆಯ ನೇತೃತ್ವ ವಹಿಸಿದ್ದರು.