ಅಕ್ರಮ ವಲಸೆ: ಎಸ್‌ಐಟಿ ತನಿಖೆಗೆ ಗೃಹ ಸಚಿವರಿಗೆ ಪತ್ರ
ಉಡುಪಿ: ಮಲ್ಪೆಯಲ್ಲಿ 7 ಮಂದಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶದ ಪ್ರಜೆಗಳನ್ನು ಬಂಧಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರಕಾರ, ಎನ್‌ಐಎ ಮೂಲಕ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಶಾಸಕ ಯಶಪಾಲ್ ಸುವರ್ಣ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ನೆಲೆಸಿರುವ ಬಗ್ಗೆ ಪೊಲೀಸ್ ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದ್ದು, ಕರಾವಳಿ ಭಾಗದ ಜನತೆ ಅದರಿಂದ ತಲ್ಲಣ ಗೊಂಡಿದ್ದಾರೆ.
ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ಬಂಧಿತ ಪ್ರಜೆಗಳು ಈಗಾಗಲೇ ನಕಲಿ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಹೊಂದಿರುವುದು ತೀರಾ ಆತಂಕಕಾರಿ ಬೆಳವಣಿಗೆಯಾಗಿದೆ. ಅಕ್ರಮ ವಲಸಿಗರಿಗೆ ಸಹಕಾರ ನೀಡುವ ಜಾಲವೇ ಕರಾವಳಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಗುಮಾನಿ ಇದ್ದು, ಉನ್ನತ ಮಟ್ಟದ ತನಿಖೆ ಮಾಡಿ ದೇಶ ವಿರೋಧಿ ಮಾನಸಿಕತೆಯ ಜಾಲ ಪತ್ತೆಹಚ್ಚುವ ಅನಿವಾರ್ಯತೆ ಇದೆ.
ರಾಷ್ಟೀಯ ಭದ್ರತೆಗೆ ಧಕ್ಕೆ ತರುವ ದೇಶ ವಿರೋಧಿ ಚಟುವಟಿಕೆಗಳಿಗೆ ಸಹಕಾರ ನೀಡುವ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿಟ್ಟಿನಲ್ಲಿ ತಕ್ಷಣ ಎನ್‌ಐಎ ಮೂಲಕ ತನಿಖೆ ನಡೆಸಿ ಕೇಂದ್ರ ಗೃಹ ಸಚಿವರಿಗೆ ಶಾಸಕ ಯಶಪಾಲ್ ಮನವಿ ಮಾಡಿದ್ದಾರೆ.
ಏಳು ಮಂದಿ ಪೊಲೀಸ್ ಕಸ್ಟಡಿಗೆ:
ಮಲ್ಪೆಯಲ್ಲಿ ಬಂಧಿತರಾಗಿರು 7 ಮಂದಿ ಬಾಂಗ್ಲಾ ಅಕ್ರಮ ವಲಸಿಗರನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 5 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿ ಜಿಲ್ಲಾ ನ್ಯಾಯಾಧೀಶರು ಸೋಮವಾರ ಆದೇಶ ನೀಡಿದ್ದಾರೆ ಎಂದು ಎಸ್‌ಪಿ ಡಾ. ಅರುಣ್ ತಿಳಿಸಿದ್ದಾರೆ.