ಬಲ್ಮಠ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ಉದ್ಘಾಟನೆ
ಮಂಗಳೂರು: ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಬಲ್ಮಠ ಇಲ್ಲಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವು ಶ್ರೀ ಭಾರತೀ ಅನುದಾನಿತ ಪ್ರಾಥಮಿಕ ಶಾಲೆ ಮುಡಿಪು ಇಲ್ಲಿ ಜರಗಿತು.
ಶಿಬಿರದ ಧ್ವಜಾರೋಹಣವನ್ನು ನೆರವೇರಿಸಿದ ಶಾಲೆಯ ಸಂಚಾಲಕ ಕೆ. ಸುಬ್ರಮಣ್ಯ ಭಟ್ ಅವರು ಗ್ರಾಮಾಂತರ ಪರಿಸರದಲ್ಲಿ ಶಿಬಿರವನ್ನು ಆಯೋಜಿಸುವುದರಿಂದ ನಗರ ಪ್ರದೇಶದ ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ಸೊಗಸನ್ನು ಅರಿತುಕೊಳ್ಳಬಹುದು ಎಂದು ಹೇಳಿದರು.
ಶಿಬಿರವನ್ನು ಉದ್ಘಾಟಿಸಿದ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಜಿ. ಶೆಟ್ಟಿ ಮಾತನಾಡಿ, ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದರೊಂದಿಗೆ, ತಂದೆ ತಾಯಿ ಗುರು ಹಿರಿಯರು ದೇಶ ಮತ್ತು ಸಮಾಜವನ್ನು ಪ್ರೀತಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
ಶಾಲೆಯ ಮುಖ್ಯೋಪಾದ್ಯಾಯ ರಾಮಕೃಷ್ಣ ಭಟ್ ಕೆ. ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ವನಿತ ದೇವಾಡಿಗ ಮಾತನಾಡಿ, ಶಿಬಿರದಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಶ್ರೀ ಭಾರತೀ ಶಾಲೆಯ ಹಳೆ ವಿದ್ಯಾರ್ಥಿಯಾದ ಪೂವಪ್ಪ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಘಟಕದ ನಾಯಕಿಯರಾದ ರಶ್ಮಿತ ಹಾಗೂ ಅಕ್ಷತ ಲಂಬಾಣಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಉಮೇಶ ಕೆ.ಆರ್. ಸ್ವಾಗತಿಸಿದರು. ಶಿಬಿರಾಧಿಕಾರಿ ಚೇತನ ವಂದಿಸಿ, ಸಹ ಶಿಬಿರಾಧಿಕಾರಿ ಸಂತೋಷ ಸಿ. ಕಾರ್ಯಕ್ರಮ ನಿರೂಪಿಸಿದರು.