ಉಡುಪಿಯ ಉಚ್ಚಿಲ ದಸರಾ ಭವ್ಯ ಶೋಭಾಯಾತ್ರೆಯೊಂದಿಗೆ ಸಂಪನ್ನ
ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಧೀನದ, ಕರ್ನಾಟಕದ ಕರವೀರಪುರ ಖ್ಯಾತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳೆದ 10 ದಿನಗಳಿಂದ ನಡೆಯುತ್ತಿದ್ದ ತೃತೀಯ ವರ್ಷದ ಉಡುಪಿ ಉಚ್ಚಿಲ ದಸರಾ ಶನಿವಾರ ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ದಿವ್ಯಮೂರ್ತಿಗಳ ಜಲಸ್ತಂಭನದೊಂದಿಗೆ ಸಂಪನ್ನಗೊಂಡಿತು. ಭವ್ಯ ಶೋಭಾಯಾತ್ರೆಗೆ ಶ್ರೀಕ್ಷೇತ್ರದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಅಪರಾಹ್ನ 3 ಗಂಟೆ ಸುಮಾರಿಗೆ ಮಹಾಪೂಜೆ ಬಳಿಕ ವಿಶೇಷವಾಗಿ ಡ್ರೋನ್ ಮೂಲಕ ಶ್ರೀ ಶಾರದಾದೇವಿ ಮತ್ತು ನವದುರ್ಗೆಯರ ವಿಗ್ರಹಗಳಿಗೆ ಪುಷ್ಪ ಸಿಂಚನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಹೋತ್ಸವದ ರೂವಾರಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್, ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಯಶಪಾಲ್ ಸುವರ್ಣ, ಉಚ್ಚಿಲ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷರಾದ ದಿನೇಶ್ ಎರ್ಮಾಳು, ಮೋಹನ್ ಬೇಂಗ್ರೆ, ಉದ್ಯಮಿ ಆನಂದ ಸಿ. ಕುಂದರ್, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್ ಸಹಿತ ಗಣ್ಯರು ಪುಷ್ಪಾರ್ಚನೆ ಗೈದರು.
ಉಚ್ಚಿಲ ದೇವಳದಿಂದ ರಾಷ್ಟ್ರೀಯ ಹೆದ್ದಾರಿ ೬೬ರ ಪೂರ್ವಬದಿಯಲ್ಲಿ ದಕ್ಷಿಣಕ್ಕೆ, ಎರ್ಮಾಳು ಮಸೀದಿ ವರೆಗೆ ಸಾಗಿ ಅಲ್ಲಿಂದ ಯೂಟರ್ನ್ ಪಡೆದು, ಉಚ್ಚಿಲ- ಮೂಳೂರು-ಕಾಪು ವರೆಗೆ ಸಾಗಿ ಕೊಪ್ಪಲಂಗಡಿ ಬಳಿ ಹೆದ್ದಾರಿಯ ಎಡಭಾಗದ ಬೀಚ್ ರಸ್ತೆಯಲ್ಲಿ ತಿರುಗಿ ಅಲ್ಲಿಂದ ಕಾಪು ಬೀಚ್‌ವರೆಗೆ ಸಾಗಲಿದೆ.
ಶೋಭಾಯಾತ್ರೆಯಲ್ಲಿ ಮೈಸೂರು ದಸರಾ ಅಂಬಾರಿ ಪ್ರತಿಕೃತಿ ಮುಂಭಾಗದಲ್ಲಿ ಸಾಗಿ, ಶ್ರೀ ಶಾರದಾ ದೇವಿ ಹಾಗೂ ನವದುರ್ಗೆಯರ ಟ್ಯಾಬ್ಲೊಗಳೊಂದಿಗೆ ತುಳುನಾಡಿನ ಸಂಸ್ಕೃತಿ, ಮೀನುಗಾರಿಕೆಯನ್ನು ಪ್ರತಿಬಿಂಬಿಸುವ ಹಾಗೂ ಮೊಗವೀರ ಸಮಾಜದ ಗುರುಗಳಾದ ಮಾಧವ ಮಂಗಳ ಗುರುಗಳು, ಸದಿಯ ಸಾಹುಕಾರರ ಸಹಿತ ವಿವಿಧ ಟ್ಯಾಬ್ಲೊಗಳು, ಕಲಾ ತಂಡಗಳು, ಭಜನಾ ತಂಡಗಳು, ಚೆಂಡೆ ವಾದ್ಯ, ಕೊಂಬು ಕಹಳೆ, ಡಿಜೆ ಸಂಗೀತ ಸಹಿತ ಸಹಸ್ರಾರು ಭಕ್ತಾದಿಗಳ ಜೊತೆಗೆ ಶೋಭಾಯಾತ್ರೆ ಸಾಗಿತು.
ಗಂಗಾರತಿ, ಸುಡುಮದ್ದು, ಲೇಸರ್ ಪ್ರದರ್ಶನ:
ಕಾಪು ಬೀಚ್ ಬಳಿ ಬೃಹತ್ ಗಂಗಾರತಿ, ಸುಮಂಗಲೆಯರಿಂದ ಮಹಾಮಂಗಳಾರತಿ, ಸುಡುಮದ್ದು ಪ್ರದರ್ಶನ, ಸಮುದ್ರ ಮಧ್ಯೆ ೫೦ಕ್ಕೂ ಹೆಚ್ಚು ಬೋಟ್‌ಗಳಿಂದ ವಿದ್ಯುದ್ದೀಪಾಲಂಕಾರ, ಸುಡುಮದ್ದು ಪ್ರದರ್ಶನ, ಲೇಸರ್ ಲೈಟ್ ಪ್ರದರ್ಶನ ನಡೆಯಲಿದೆ. ಕಾಪು ಬೀಚ್ ಬಳಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಪು ಬೀಚ್ ಬಳಿ ಸಮುದ್ರದಲ್ಲಿ ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಜಲಸ್ತಂಭನಗೊಳಿಸಲಾಗುವುದು.
ಪೊಲೀಸರಿಂದ ಬಿಗು ಪಹರೆ:
ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾಪು ಸಿಪಿಐ ಜಯಶ್ರೀ ಮಾನೆ, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್ ಎಂ.ಎಸ್., ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್ ನೇತೃತ್ವದಲ್ಲಿ ಸೂಕ್ತ ಭದ್ರತೆ ಜೊತೆಗೆ ಸಾವಿರಾರು ಸ್ವಯಂಸೇವಕರು ಶಿಸ್ತುಪಾಲನೆಯಲ್ಲಿ ಸಹಕರಿಸಿದರು.