ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಎನ್.ಎಸ್.ಎಸ್ ಸುವರ್ಣ ಸಂಭ್ರಮಾಚರಣೆ

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಎನ್.ಎಸ್.ಎಸ್ ಸುವರ್ಣ ಸಂಭ್ರಮಾಚರಣೆ

ಸಮಾಜ ಸೇವಾ ಮನೋಭಾವದಿಂದ ಶೈಕ್ಷಣಿಕ ಕಲಿಕೆ ಅರ್ಥಪೂರ್ಣ: ಡಿ. ಹರ್ಷೇಂದ್ರಕುಮಾರ್


ಉಜಿರೆ: ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಸೇವಾ ಮನೋಭಾವವು ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಯನ್ನು ಅರ್ಥಪೂರ್ಣಗೊಳಿಸುತ್ತದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಶನಿವಾರ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿತವಾದ ‘ಸುವರ್ಣ ಸಮ್ಮಿಲನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ-ಕಾಲೇಜು ಕಲಿಕೆಯಿಂದ ಹಲವರು ವಿದ್ಯಾವಂತರಾಗುತ್ತಾರೆ. ವಿದ್ಯಾವಂತರು ಬೆಳವಣಿಹೆಯ ಹಾದಿ ಕ್ರಮಿಸುತ್ತಾ ವಿಚಾರವಂತರಾಗಿ ರೂಪುಗೊಳ್ಳುತ್ತಾರೆ. ವಿದ್ಯೆ ಮತ್ತು ವೈಚಾರಿಕತೆಯನ್ನು ರೂಢಿಸಿಕೊಂಡಾಗ ವ್ಯಕ್ತಿಗಳಲ್ಲಿ ಪ್ರಬುದ್ಧತೆ ರೂಪುಗೊಳ್ಳುತ್ತದೆ. ವಿದ್ಯೆ, ವಿಚಾರಗಳನ್ನು ಆಚರಣೆಗೆ ತಂದಾಗ ಆ ಪ್ರಬುದ್ಧತೆಗೆ ಅರ್ಥಪೂರ್ಣ ಜೀವಂತಿಕೆ ದಕ್ಕುತ್ತದೆ. ಇಂಥ ಜೀವಂತಿಕೆಯ ಶಕ್ತಿಯನ್ನು ರಾಷ್ಟ್ರೀಯ ಸೇವಾ ಯೋಜನೆ ಮೂಡಿಸುತ್ತದೆ ಎಂದು ಅವರು ಹೇಳಿದರು.

ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ನಾಗರಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಮುಖಪಾತ್ರವಹಿಸುತ್ತವೆ. ರಾಷ್ಟ್ರೀಯ ಸೇವಾ ಯೋಜನೆಯೊಂದಿಗೆ ಗುರುತಿಸಿಕೊಂಡ ವಿದ್ಯಾರ್ಥಿಗಳು ನೇರವಾಗಿ ಸಮುದಾಯಗಳೊಂದಿಗೆ ಬೆರೆತು ನಾಗರಿಕ ಪ್ರಜ್ಞೆಯನ್ನು ನೆಲೆಗೊಳಿಸುತ್ತಾರೆ. ಎನ್.ಎಸ್.ಎಸ್. ಸ್ವಯಂ ಸೇವಕರು ಸ್ವತಃ ನಾಗರಿಕ ಪ್ರಜ್ಞೆಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸಮಾಜದ ವಿವಿಧ ವಲಯಗಳಲ್ಲಿ ಸಮಾಜಪರ ಮನೋಭಾವವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ವಿಶೇಷ ಕೊಡುಗೆ ನೀಡುತ್ತಾರೆ ಎಂದರು. ಹಳ್ಳಿಗಳಲ್ಲಿ ಸೇವಾ ಕೈಂಕರ್ಯದೊಂದಿಗೆ ಸಾಮಾಜಿಕ ಕೆಲಸಗಳನ್ನು ನಿರ್ವಹಿಸಿದ ಎಸ್.ಡಿ.ಎಂ ಕಾಲೇಜಿನ ಎನ್.ಎಸ್.ಎಸ್ ಘಟಕವು 36 ಪ್ರಶಸ್ತಿಗಳನ್ನು ಪಡೆದಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಯೋಜನಾಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಎನ್.ಎಸ್.ಎಸ್.ನ ಸಮಾಜಪರ ಆಲೋಚನಾಕ್ರಮಗಳ ವಿಶೇಷತೆಯನ್ನು ಪರಿಚಯಿಸಿದರು. ಎನ್.ಎಸ್.ಎಸ್. ಸ್ವಯಂಸೇವಕರಾದವರು ಸಮಾಜಕ್ಕೆ ಕೊಡುಗೆಗಳನ್ನು ಕೊಡುವುದರ ಕಡೆಗೇ ಹೆಚ್ಚು ಚಿಂತಿಸುತ್ತಾರೆ. ಹತಾಶಗೊಂಡವರು, ಸಾಮಾಜಿಕ ಗಲಭೆಗಳಲ್ಲಿ ತೊಡಗಿಸಿಕೊಂಡು ಅಶಾಂತ ಮನಸ್ಥಿತಿಯೊಂದಿಗಿದ್ದವರು ಎನ್.ಎಸ್.ಎಸ್. ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಿದ್ದರೆ ಸುಧಾರಣೆಯ ಹಾದಿ ಹಿಡಿಯುತ್ತಿದ್ದರು. ಎನ್.ಎಸ್.ಎಸ್.ನ ಕಾರ್ಯಚಟುವಟಿಕೆಗಳು ಸ್ವಯಂಸೇವಾ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ವ್ಯಕ್ತಿಗತವಾಗಿ ರಚನಾತ್ಮಕ ದೃಷ್ಟಿಕೋನ ಹೊಂದುವಲ್ಲಿ ಸಹಾಯಕವಾಗುತ್ತವೆ ಎಂದು ನುಡಿದರು.

ರಾಷ್ಟ್ರದಾದ್ಯಂತ 45 ಲಕ್ಷಕ್ಕೂ ಹೆಚ್ಚು ಎನ್.ಎಸ್.ಎಸ್. ಸ್ವಯಂಸೇವಕರಿದ್ದಾರೆ. ಕರ್ನಾಟಕವು ಆರುವರೆ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿ ವಿಶೇಷ ಮನ್ನಣೆ ಪಡೆದಿದೆ. ಎಸ್.ಡಿ.ಎಂ ಕಾಲೇಜಿನ ಎನ್.ಎಸ್.ಎಸ್. ಘಟಕವು ವಿನೂತನವಾಗಿ ಗುರುತಿಸಿಕೊಂಡಿದೆ ಎಂದರು. ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ. ಅಮೀನ್ ಮಾತನಾಡಿದರು. 

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಮಾತನಾಡಿದರು. ಸುಧಾರಿತ ಸಮಾಜದ ಪರಿಕಲ್ಪನೆಯನ್ನು ವ್ಯಕ್ತಿಗತ ಗುಣಾತ್ಮಕ ಬದಲಾವಣೆಯ ಮೂಲಕ ಅನುಷ್ಠಾನಕ್ಕೆ ತರುವ ಶ್ರೇಷ್ಠ ಕಾರ್ಯಗಳ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯು ಹೆಗ್ಗುರುತು ಮೂಡಿಸಿದೆ. ಜನರನ್ನು ಸಾಮಾಜಿಕ ಆಸ್ತಿಯಾಗಿಸುವಲ್ಲಿ ಎನ್.ಎಸ್.ಎಸ್. ಕೊಡುಗೆಗಳು ನಿರ್ಣಾಯಕ ಪಾತ್ರವಹಿಸಿವೆ ಎಂದರು.

ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ‘ಬದುಕು ಕಟ್ಟೋಣ ಬನ್ನಿ’ ಸಂಸ್ಥೆಯ ಲಕ್ಷ್ಮೀ ಮೋಹನ್, ರವಿ ಕಟಪಾಡಿ ಅವರಿಗೆ ಸುವರ್ಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿಂದಿನ ಅವಧಿಗಳಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಗಳಾಗಿದ್ದ ಡಾ. ಬಿ.ಎ. ಕುಮಾರ ಹೆಗ್ಡೆ, ಡಾ. ಸಂಪತ್‌ಕುಮಾರ್ ಎಸ್, ಡಾ. ಸತೀಶ್ಚಂದ್ರ ಎಸ್, ಡಾ. ಜಯಕುಮಾರ ಶೆಟ್ಟಿ, ಪ್ರೊ. ಡಿ. ಕೃಷ್ಣಮೂರ್ತಿ, ಪ್ರೊ. ಎಸ್.ಎನ್. ಕಾಕತ್ಕರ್, ಡಾ. ವಿಶ್ವನಾಥ ಪಿ, ಡಾ. ಎಂ.ಪಿ. ಶ್ರೀನಾಥ, ರೂಪಾರಾಣಿ, ಡಾ. ಭಾನುಪ್ರಕಾಶ್ ಬಿ, ಗಣೇಶ್ ವಿ. ಶಿಂಧೆ, ಪ್ರೊ. ಆಲ್ಫೋನ್ಸಮ್ಮ, ಆಶಾಕಿರಣ, ಶಕುಂತಲಾ, ಡಾ. ಲಕ್ಷ್ಮೀನಾರಾಯಣ ಕೆ.ಎಸ್. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ‘ಸೇವಾ ಪಥ’ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಅಧ್ಯಾಪಕ ದೀಕ್ಷಿತ್ ರೈ ಹಾಗೂ ವಿದ್ಯಾರ್ಥಿನಿ ಸಿಂಚನ ಕಲ್ಲೂರಾಯ ನಿರೂಪಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್ ಸ್ವಾಗತಿಸಿ, ಪ್ರೊ. ದೀಪಾ ಆರ್.ಪಿ. ವಂದಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article