ಮದರಸಗಳ ಗೌಪ್ಯ ಮಾಹಿತಿ ಸಂಗ್ರಹಕ್ಕೆ ಆಕ್ಷೇಪ

ಮದರಸಗಳ ಗೌಪ್ಯ ಮಾಹಿತಿ ಸಂಗ್ರಹಕ್ಕೆ ಆಕ್ಷೇಪ

ಮಂಗಳೂರು: ನೋಂದಾಯಿತ ಮದರಸಗಳ ಬಗ್ಗೆ ವಕ್ಫ್ ಇಲಾಖೆಯಲ್ಲಿ ಸಂಪೂರ್ಣ ಮಾಹಿತಿಗಳಿದ್ದರೂ, ಪೊಲೀಸರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮದರಸಗಳಲ್ಲಿ ಗೌಪ್ಯವಾಗಿ ಮಾಹಿತಿ ಸಂಗ್ರಹ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗುವುದು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ರನ್ನು ಭೇಟಿ ಮಾಡಿದ ಮುಸ್ಲಿಂ ಮುಖಂಡರ ನಿಯೋಗಕ್ಕೆ ಸೋಮವಾರ ಭರವಸೆ ನೀಡಿದರು.

ಕೇಂದ್ರ ಗುಪ್ತಚರ ಇಲಾಖೆಯ ಸೂಚನೆಯಂತೆ ರಾಜ್ಯ ಗುಪ್ತಚರ ಇಲಾಖೆಯು ಪೊಲೀಸರ ಮೂಲಕ ಗೌಪ್ಯವಾಗಿ ಮದರಸಗಳ ಮಾಹಿತಿ ಪಡೆಯಲು ಮುಂದಾಗಿದ್ದೇ ಮುಸ್ಲಿಮರಲ್ಲಿ ಆತಂಕ ಮತ್ತು ಗೊಂದಲ ಸೃಷ್ಟಿಯಾಗಲು ಕಾರಣ. ಮದರಸಗಳ ಬಗ್ಗೆ ಮಾಹಿತಿ ಬೇಕಿದ್ದರೆ ಸರ್ಕಾರ ಅಧಿಕೃತವಾಗಿ ವಕ್ಫ್ ಇಲಾಖೆಯಿಂದ ನೇರವಾಗಿ ಪಡೆದುಕೊಳ್ಳಬಹುದು, ನೋಂದಾಯಿತ ಮದರಸಗಳ ಬಗ್ಗೆ ವಕ್ಫ್ ಇಲಾಖೆಯಲ್ಲಿ ಸಂಪೂರ್ಣ ಮಾಹಿತಿಗಳಿವೆ. ಮಾಹಿತಿ ನೀಡಲು ಮಸೀದಿ, ಮದರಸ ಆಡಳಿತ ಸಮಿತಿ ಬದ್ಧವಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ತಿಳಿಸಿದ್ದಾರೆ.

ಮದರಸಗಳ ಗೌಪ್ಯ ಮಾಹಿತಿ ಸಂಗ್ರಹದ ಬಗ್ಗೆ ಆಕ್ಷೇಪ ಮತ್ತು ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಸ್ಥಗಿತಗೊಳಿಸು ವಂತೆ ರಾಜ್ಯ ಗುಪ್ತಚರ ಇಲಾಖೆಯ ನಿರ್ದೇಶಕರು ಸೂಚನೆ ಕೊಟ್ಟಿದ್ದು, ರಾಜ್ಯದಲ್ಲಿ ಈ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಯಾರಿಗೂ ಯಾವುದೇ ಆತಂಕ, ಗೊಂದಲ ಬೇಡ ನಾವು ಕೂಡ ಈ ಪ್ರಕ್ರಿಯೆ ಮುಂದುವರಿಸುವುದಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ರಾಜ್ಯ ಗುಪ್ತಚರ ಸಂಸ್ಥೆಯ ಸೂಚನೆಯಂತೆ ರಾಜ್ಯದಾದ್ಯಂತ ಗೌಪ್ಯವಾಗಿ ಮದರಸಗಳ ಮಾಹಿತಿ ಸಂಗ್ರಹ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿರುವುದು ಬೆಳಕಿಗೆ ಬಂದಿತ್ತು. ಮಂಗಳೂರು ಕಮಿಷನರೇಟ್ ಪೊಲೀಸರು ಕೂಡ ಮದರಸ ಗಳ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದು ತಿಳಿದುಬಂದಿತ್ತು. ಇದರಿಂದ ಮುಸ್ಲಿಂ ಸಮುದಾಯದಲ್ಲಿ ಆತಂಕ ಮತ್ತು ಗೊಂದಲ ಮನೆ ಮಾಡಿತ್ತು. ಈ ಬಗ್ಗೆ ಮಾಹಿತಿ ಪಡೆಯಲು ಕೆ.ಕೆ ಶಾಹುಲ್ ಹಮೀದ್ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಗ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಚರ್ಚೆ ನಡೆಸಿದೆ.

ಈ ವೇಳೆ ನಿಯೋಗಕ್ಕೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತರು, ಮದರಸಗಳ ಮಾಹಿತಿ ಸಂಗ್ರಹ ಪ್ರಕ್ರಿಯೆ ಸ್ಥಗಿತ ಗೊಳಿಸುವಂತೆ ರಾಜ್ಯ ಗುಪ್ತಚರ ನಿರ್ದೇಶಕರಿಂದ ನಮಗೆ ಸೂಚನೆ ಬಂದಿದೆ, ಪೂರ್ತಿ ರಾಜ್ಯದಲ್ಲಿ ಈ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದರು. ಈ ಕಾರ್ಯದಲ್ಲಿ ನಾವು ಮುಂದುವರಿಯುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಹೀಗಾಗಿ ಯಾರಿಗೂ ಯಾವುದೇ ಗೊಂದಲವಾಗಲಿ ಆತಂಕವಾಗಲಿ ಬೇಡ ಎಂದು ಭರವಸೆ ನೀಡಿದ್ದಾರೆ.

ಪಾಲಿಕೆ ಸದಸ್ಯರಾದ ಅಬ್ದುಲ್ ರವೂಫ್, ಲತೀಫ್ ಕಂದಕ್, ಮುಖಂಡರಾದ ಹನೀಫ್ ಹಾಜಿ ಗೋಳ್ತಮಜಲು, ಮುಹಮ್ಮದ್ ಬಪ್ಪಳಿಗೆ, ರಫೀಕ್ ಕಣ್ಣೂರು, ಹೈದರ್ ಬೋಳಾರ, ಹಬೀಬುಲ್ಲಾ ಕಣ್ಣೂರು ಮತ್ತು ಸಮೀರ್ ಕಾಟಿಪಳ್ಳ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article