
ನಿವೃತ್ತ ಸರ್ಕಾರಿ ಶಿಕ್ಷಕ ಚಂದ್ರಕಾಂತ ರಾಧಾಬಾಯಿ ದಾಮೋದರ್ ಕುಲಕರ್ಣಿ ಅವರನ್ನು ಸನ್ಮಾನಿಸಿದ ಶಾಸಕ ಕಾಮತ್
ಮಂಗಳೂರು: ಸ್ವಚ್ಛತೆಯ ವಿಷಯದಲ್ಲಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನೇ ಪ್ರಭಾವಿಸಿದ್ದ ಹಿರಿಯರಾದ ನಿವೃತ್ತ ಸರ್ಕಾರಿ ಶಿಕ್ಷಕ ಚಂದ್ರಕಾಂತ ರಾಧಾಬಾಯಿ ದಾಮೋದರ್ ಕುಲಕರ್ಣಿ (ಸ್ವಚ್ಛತಾ ಬಾಬಾ) ಅವರನ್ನು ಶಾಸಕ ವೇದವ್ಯಾಸ ಕಾಮತ್ ಅವರು ಪುಣೆಯ ಚುನಾವಣಾ ಕಾರ್ಯಗಳ ನಡುವೆ ಭೇಟಿ ಮಾಡಿ ಸನ್ಮಾನಿಸಿದರು.
ನಂತರ ಮಾತನಾಡಿದ ಶಾಸಕರು, ಪ್ರಧಾನಿಗಳು ದೇಶದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದಾಗ ನಿವೃತ್ತಿ ಜೀವನ ನಡೆಸುತ್ತಿದ್ದ ಕುಲಕರ್ಣಿಯವರು ತಮಗೆ ಬರುತ್ತಿದ್ದ 15,000 ಪಿಂಚಣಿಯಲ್ಲಿ ತಿಂಗಳಿಗೆ 5 ಸಾವಿರದಂತೆ, ಒಟ್ಟು 2,60,000 ಸ್ವಚ್ಛ ಭಾರತ್ ನಿಧಿಗೆ ನೀಡಿ ದೇಶಕ್ಕೆ ಮಾದರಿಯಾಗಿದ್ದರು. ಅನೇಕ ಬಾರಿ ಕಾಶಿ, ಅಯೋಧ್ಯೆಗೆ ತೆರಳಿ 5-10 ದಿವಸಗಳ ಕಾಲ ತಂಗಿ ಸ್ವಚ್ಛತಾ ಕಾರ್ಯ ಮಾಡುವುದರಲ್ಲೇ ಸಂತೃಪ್ತಿಯನ್ನು ಕಾಣುವ ವಿಶೇಷ ವ್ಯಕ್ತಿ ಇವರು. ಇವೆಲ್ಲವನ್ನು ಗಮನಿಸಿ ಮಾನ್ಯ ಪ್ರಧಾನಿಗಳು ತಮ್ಮ ಮನ್ ಕಿ ಬಾತ್ ನಲ್ಲಿ ಇವರ ಬಗ್ಗೆ ಉಲ್ಲೇಖಿಸಿದ್ದು ಮಾತ್ರವಲ್ಲದೇ, ಎರಡು ಬಾರಿ ಅತ್ಯಂತ ಗೌರವದಿಂದ ಕರೆಸಿಕೊಂಡು ಸನ್ಮಾನಿಸಿದ್ದರು ಎಂದು ಶಾಸಕರು ಹೇಳಿದರು.
ಸ್ವತಃ ಪ್ರಧಾನಿಗಳೇ ಕುಲಕರ್ಣಿಯವರ ಕಾರ್ಯದಿಂದ ನಾನು ತುಂಬಾ ಪ್ರಭಾವಿತನಾಗಿ ಪ್ರೇರಣೆ ಪಡೆದಿದ್ದೇನೆ ಎಂದಿರುವುದು ಇಲ್ಲಿ ಗಮನಾರ್ಹವಾಗಿದ್ದು, ಉತ್ತರ ಪ್ರದೇಶದ ಅಮೇಥಿಯಲ್ಲಿ ಜನಸಾಮಾನ್ಯರ ಉಪಯೋಗಕ್ಕಾಗಿ ಸುಮಾರು 450ಕ್ಕೂ ಹೆಚ್ಚು ಕುಡಿಯುವ ನೀರಿನ ಬೋರ್ವೆಲ್ ನಿರ್ಮಾಣಗೊಳಿಸಿರುವ ಇವರು ತ್ರಯಂಬಕೇಶ್ವರದ ಪ್ರಾಚೀನ ಕುಂಡ ಸಹಿತ ಅನೇಕ ಐತಿಹಾಸಿಕ ಕೆರೆಗಳನ್ನು ಪುನರುಜ್ಜೀವನ ಗೊಳಿಸಿದ್ದಾರೆ. ಇಂತಹ ಸಮಾಜಮುಖಿ ವ್ಯಕ್ತಿ ನಮ್ಮ ಮಂಗಳೂರಿನ ಶ್ರೀ ರಾಮಕೃಷ್ಣ ಮಠಕ್ಕೂ ಮೂರು ಸಲ ಭೇಟಿ ನೀಡಿ ಸ್ವಚ್ಛತೆಯ ನಿಟ್ಟಿನಲ್ಲಿ ಮಠವು ವಹಿಸಿರುವ ಕಾಳಜಿ ಬಗ್ಗೆ ವಿಶೇಷ ಮೆಚ್ಚುಗೆ ಸೂಚಿಸಿದ್ದರು ಎಂದರು.