
ಪರಶುರಾಮ ಮೂರ್ತಿ: ಮುಂಗಡ ಹಣದ ಮೂಲ ಪತ್ತೆಗೆ ಆಗ್ರಹ
ಉಡುಪಿ: ಕಾರ್ಕಳ ತಾಲೂಕಿನ ಬೈಲೂರು ಉಮಿಕಲ್‌ಬೆಟ್ಟದ ವಿವಾದಿತ ಪರಶುರಾಮ ಥೀಮ್‌ಪಾರ್ಕಿನಲ್ಲಿ ನಿರ್ಮಿಸಲಾದ ಪರಶುರಾಮ ಮೂರ್ತಿ ನಿರ್ಮಾಣಕ್ಕೆಂದು ನೀಡಲಾದ 1.5 ಕೋ. ರೂ. ಹಣದ ಮೂಲ ಪತ್ತೆ ಮಾಡುವಂತೆ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರ್ತಿ ನಿರ್ಮಾಣದ ಟೆಂಡರ್‌ಗೆ ಮುನ್ನವೇ 1.5 ಕೋ. ರೂ. ಮೊತ್ತವನ್ನು ಶಿಲ್ಪಿ ಕೃಷ್ಣ ನಾಯ್ಕ್‌ಗೆ ಪಾವತಿಸಲಾಗಿದೆ. ನಕಲಿ ಕಂಚಿನ ಮೂರ್ತಿ ನಿರ್ಮಾಣ ಆರೋಪ ಹಿನ್ನೆಲೆಯಲ್ಲಿ ಶಿಲ್ಪಿ ಪೊಲೀಸ್ ಕಸ್ಟಡಿಯಲ್ಲಿದ್ದು, ಪಾವತಿಸಲಾದ ಹಣ ಬೇರೆ ಬೇರೆ ಖಾತೆಗಳ ಮೂಲಕ ಶಿಲ್ಪಿ ಖಾತೆಗೆ ಜಮೆಯಾಗಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಆ ಹಣವನ್ನು ಕಂಚು ಖರೀದಿಗಾಗಲೀ ಮೂರ್ತಿ ನಿರ್ಮಾಣದ ಉದ್ದೇಶಗಳಿಗಾಗಲೀ ಬಳಸಿದ ಬಗ್ಗೆ ದಾಖಲೆ ಇಲ್ಲ. ಆದ್ದರಿಂದ ಆ ಹಣದ ಮೂಲ ಪತ್ತೆ ಮಾಡಬೇಕಾಗಿದೆ ಎಂದು ಆಗ್ರಹಿಸಿದರು.
ಕಳಪೆ ಗುಣಮಟ್ಟದ ಪರಶುರಾಮ ಮೂರ್ತಿಯ ಮೇಲ್ಭಾಗವನ್ನು ತೆಗೆದುಕೊಂಡು ಹೋಗಲಾಗಿದೆ. ಅದನ್ನು ಇನ್ನೂ ಕೂಡಿಸಿಲ್ಲ. ಕಿತ್ತಕೊಂಡು ಹೋಗಲಾಗಿರುವ ಮೂರ್ತಿಯ ಅವಶೇಷಗಳ ಬಗ್ಗೆಯೂ ಸುಳಿವಿಲ್ಲ. ಪರಶುರಾಮನ ಹೆಸರಿನಲ್ಲಿ ಕರಾವಳಿ ಮಂದಿಯ ಧಾರ್ಮಿಕ ಭಾವನೆಗೆ ಧಕ್ಕೆ ಬಂದಿದೆ. ಹಾಗಾಗಿ ಈ ಪ್ರಕರಣಕ್ಕೆ ಆದಷ್ಟು ಶೀಘ್ರವಾಗಿ ತಾತ್ವಿಕ ಅಂತ್ಯ ಹಾಡಬೇಕಾಗಿದೆ ಎಂದು ಉದಯ ಕುಮಾರ್ ಶೆಟ್ಟಿ ತಿಳಿಸಿದರು.
ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸುವಂತೆ ಒತ್ತಡ ಹೇರಿ, ಕಾರ‍್ಯಕ್ರಮದ ಉದ್ಘಾಟನೆಗೆ ಸುಮಾರು 33 ಇಲಾಖೆಗಳನ್ನು ಬಳಸಿಕೊಂಡು ಅದ್ದೂರಿ ಕಾರ‍್ಯಕ್ರಮ ಮಾಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪ್ರಕರಣದ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ. ಕಾಮಗಾರಿ ನಿರ್ಮಾಣ ಕೈಗೊಂಡ ನಿರ್ಮಿತಿ ಕೇಂದ್ರದ ಇಂಜಿನಿಯರ್‌ಗಳೂ ಬೇಜವಾಬ್ದಾರಿ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ಧವೂ ಕ್ರಮ ಆಗಬೇಕಾಗಿದೆ ಎಮದು ಉದಯಕುಮಾರ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶುಭದ ರಾವ್, ಪುರಸಭೆ ಮಾಜಿ ಸದಸ್ಯ ವಿವೇಕಾನಂದ ಶೆಣೈ, ಮಾಜಿ ಅಧ್ಯಕ್ಷ ಸುಬಿತ್ ಎನ್. ಆರ್., ತಾ.ಪಂ. ಮಾಜಿ ಸದಸ್ಯ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.