
ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ
ಉಡುಪಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಾವಳಿಯಡಿ ಕಾರ‍್ಯನಿರ್ವಹಿಸುತ್ತಿರುವ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಾರ‍್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಪಟ್ಟಣ ಸಹಕಾರಿ ಬ್ಯಾಂಕ್ ಆಗಿದ್ದು, ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಡಿವಿಡೆಂಡ್ ನೀಡುವ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಬ್ಯಾಂಕಿನ ವಿರುದ್ಧ ಆರ್ಥಿಕ ಅವ್ಯವಹಾರದ ಆರೋಪ ಮಾಡುತ್ತಿರುವ ಮಾಜಿ ಶಾಸಕ ರಘುಪತಿ ಭಟ್ ಸೇರಿದಂತೆ ಮತ್ತಿತರರು ಸೂಕ್ತ ದಾಖಲೆ ಒದಗಿಸಲಿ. ಇಲ್ಲವಾದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಯಶಪಾಲ್ ಸುವರ್ಣ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬ್ಯಾಂಕಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬ್ಯಾಂಕಿನಿಂದ 1400ಕ್ಕೂ ಅಧಿಕ ಮಂದಿಗೆ ಸಾಲ ನೀಡಿ, 28 ಕೋಟಿ ರೂ.ಗೂ ಹೆಚ್ಚು ಅವ್ಯವಹಾರ ನಡೆಸಿದ್ದಾರೆ ಎಂದು ಬ್ಯಾಂಕಿನ ಸದಸ್ಯರೂ ಆಗಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಆರೋಪಿಸಿದ್ದಾರೆ. ಅದ್ದಕ್ಕೆ ಅವರು ಸೂಕ್ತ ದಾಖಲೆ ಒದಗಿಸಬೇಕು. ಇಲ್ಲವಾದಲ್ಲಿ ಎಸ್.ಐ.ಟಿ ಮಾತ್ರವಲ್ಲ ಇ.ಡಿ. ಅಥವಾ ಸಿಬಿಐ ಯಾವುದೇ ತನಿಖೆಗೆ ಸಿದ್ದ. ಒಂದು ವೇಳೆ ಆರೋಪ ಸಾಬೀತಾದಲ್ಲಿ ಅಷ್ಟೂ ಮೊತ್ತವನ್ನು ಕಟ್ಟಲು ಆಡಳಿತ ಮಂಡಳಿ ಸಿದ್ದವಿದೆ. ಸಾಬೀತು ಮಾಡಲು ವಿಫಲರಾದರೆ ಆ ಮೊತ್ತವನ್ನು ರಘುಪತಿ ಭಟ್ ಭರಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ರಘುಪತಿ ಭಟ್ ಮತ್ತು ಇತರರು ಬ್ಯಾಂಕಿನ ವಿರುದ್ದ ಸುಳ್ಳು ದಾಖಲೆ ಸೃಷ್ಟಿಸಿ ಬ್ಯಾಂಕಿನ ಘನತೆಗೆ ಆ ಮೂಲಕ ಸಹಕಾರಿ ವ್ಯವಸ್ಥೆಯ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಮಾನನಷ್ಟ, ಕ್ರಿಮಿನಲ್ ಹಾಗೂ ನಷ್ಟ ಪರಿಹಾರ ಮೊಕದ್ದಮೆ ಹೂಡಲು ನಿರ್ಧರಿಸಿರುವುದಾಗಿ ಶಾಸಕರೂ ಆಗಿರುವ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಸುವರ್ಣ ತಿಳಿಸಿದರು.
ಬ್ಯಾಂಕಿನಿಂದ ಸಾಲ ಪಡೆದವರು ರಘುಪತಿ ಭಟ್ ಹೇಳಿದಂತೆ ಅವರು ಯಾರೂ ಸಂತ್ರಸ್ತರಲ್ಲ, ನಮ್ಮ ಬ್ಯಾಂಕಿನ ಸಾಲ ಸುಸ್ತಿದಾರರಾಗಿದ್ದು, ಈಗಾಗಲೇ ನ್ಯಾಯಾಲಯದಿಂದ ಸಾಲ ವಸೂಲಾತಿಗೆ ಆದೇಶ ಜಾರಿಯಾಗಿದೆ. ಸುಸ್ತಿದಾರರು ನ್ಯಾಯಾಲಯದಲ್ಲಿ ಹೋರಾಟ ಮಾಡುವ ಬದಲು ಮಾಜಿ ಶಾಸಕರಿಗೆ ದೂರು ನೀಡಿದ್ದಾರೆ. ಅವರು ನ್ಯಾಯಾಧೀಶರೇ? ಅವರು ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಸಾಲಗಾರರಾಗಿದ್ದಾರೆ. ನಮ್ಮದು ಹಿಂದುಳಿದ ಸಮುದಾಯದ ಬ್ಯಾಂಕ್ ಆಗಿದ್ದು, ಅದರಲ್ಲಿ ರಘುಪತಿ ಭಟ್ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ ಎಂದರು.
ಸಹಕಾರಿ ನಿಯಮದಂತೆ ಸದಸ್ಯರೋರ್ವರಿಗೆ ಅನ್ಯಾಯವಾದಲ್ಲಿ ಲಿಖಿತ ಮನವಿ ಅಥವಾ ಮಹಾಸಭೆಯಲ್ಲಿ ಪ್ರಸ್ತಾಪಿಸಬೇಕು. ಅದು ಬಿಟ್ಟು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸಹಕಾರಿ ರಂಗದ ನಿಯಮ ಮೀರಿ ವರ್ತಿಸಿರುವ ರಘುಪತಿ ಭಟ್ ಅವರ ಸದಸ್ಯತನ ಅನರ್ಹತೆ ಹಾಗೂ ಪಡೆದ ಸಾಲ ಮರುಪಾವತಿ ಮಾಡದಿದ್ದಲ್ಲಿ ಅವರ ಆಸ್ತಿ ಜಫ್ತಿಗೆ ಕ್ರಮ ಕೈಗೊಳ್ಳುವುದಾಗಿ ಯಶಪಾಲ್ ತಿಳಿಸಿದರು.
ಬ್ಯಾಂಕಿನ ವಿರುದ್ಧ ಅಪಪ್ರಚಾರ ನಡೆಸಿದ ನಾಗೇಂದ್ರ ಪುತ್ರನ್, ಪ್ರಸಾದ್‌ರಾಜ್ ಕಾಂಚನ್, ಮನೋಜ್ ಕರ್ಕೇರ, ಸುಖೇಶ್ ಮತ್ತು ವಿಶ್ವನಾಥ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.
ಭಟ್ ಬಗ್ಗೆ ಸಾಕಷ್ಟು ದೂರುಗಳಿವೆ:
ರಘುಪತಿ ಭಟ್ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯಬಾರದು. ಅವರು ಈ ಹಿಂದೆ ನಡೆಸುತ್ತಿದ್ದ ಮದ್ರಾಸ್ ಫೈನಾನ್ಸ್, ಪ್ರಸಕ್ತದ ಪರಿವಾರ್ ಫೈನಾನ್ಸ್‌ಗಳ ಬಗ್ಗೆ ನನ್ನ ಬಳಿಯೂ ಬೇಕಾದಷ್ಟು ದೂರುಗಳಿವೆ. ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಆರ್.ಬಿ.ಐ ಅಧೀನದಲ್ಲಿ ಬರುತ್ತದೆ. ಎಸ್‌ಬಿಐಯಂಥ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಉಪಯೋಗಿಸುವ ಸಾಫ್ಟ್‌ವೇರ್‌ನ್ನು ನಮ್ಮ ಬ್ಯಾಂಕ್ ಹೊಂದಿದ್ದು, ಆರ್.ಬಿ.ಐ ಮಾನಿಟರ್ ಮಾಡುತ್ತಿರುತ್ತದೆ ಎಂದು ಯಶಪಾಲ್ ಸುವರ್ಣ ತಿಳಿಸಿದರು.
ಅಧಿವೇಶನದಲ್ಲಿ ಧ್ವನಿ:
ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಜನಸಾಮಾನ್ಯರ ಬಗ್ಗೆ ಕಳಕಳಿ ಇದ್ದರೆ ಉಡುಪಿಯಲ್ಲಿ ಅವರ ಆತ್ಮೀಯರು ನಡೆಸುತ್ತಿದ್ದ ಕಮಲಾಕ್ಷಿ ಸೊಸೈಟಿಯ ಬಹುಕೋಟಿ ಹಗರಣದಲ್ಲಿ ನಿಜವಾಗಿಯೂ ವಂಚನೆಗೆ ಒಳಗಾಗಿರುವ ಸಂತ್ರಸ್ತರ ಪರ ಹೋರಾಟ ಮಾಡಲಿ. ಈ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದರು.
ಗೋಕಾಖ್ ಬ್ಯಾಂಕಿನ ನಕಲಿ ಪತ್ರ:
ಗದಗ ಜಿಲ್ಲೆಯ ಗೋಕಾಖ್ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿಗೆ ಆರ್‌ಬಿಐ ನೀಡಿದ ನಿರ್ದೇಶನಗಳ ಮೂಲ ಪ್ರತಿಯನ್ನು ತಿರುಚಿ, ಉಡುಪಿ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಲೆಕ್ಕಪರಿಶೋಧಕರ ನಕಲಿ ಸಹಿ ಮತ್ತು ಮೊಹರುಳ್ಳ ಪತ್ರವನ್ನು ಸಾಮಾಜಿಕ ಜಾಲತಾಣ ಮೂಲಕ ಹರಿಯಬಿಟ್ಟ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ನಿರ್ದೇಶಕ ವಿನಯ ಕರ್ಕೇರ, ವೃತ್ತಿಪರ ನಿರ್ದೇಶಕ ಮಂಜುನಾಥ್ ಎಸ್.ಕೆ., ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ, ಎಜಿಎಂ ಶಾರಿಕಾ ಕಿರಣ್ ಉಪಸ್ಥಿತರಿದ್ದರು.