ಬೀಚ್ ರೆಸಾರ್ಟ್ ನ ಈಜು ಕೊಳಕ್ಕೆ ಇಳಿದಿದ್ದ ಮೂವರು ಮೈಸೂರು ಮೂಲದ ಯುವತಿಯರು ನೀರಲ್ಲಿ ಮುಳುಗಿ ಮೃತ್ಯು
ಉಳ್ಳಾಲ: ಸೋಮೇಶ್ವರ ಪೆರಿ ಬೈಲ್ ಉಚ್ಚಿಲದ ಖಾಸಗಿ ರೆಸಾರ್ಟ್ ನ ಈಜುಕೊಳದಲ್ಲಿ ನೀರಾಟವಾಡುತ್ತಿದ್ದ ಮೈಸೂರು ಮೂಲದ ಮೂವರು ಯುವತಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಮೈಸೂರು ಕುರುಬಾರ ಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21) ಮೈಸೂರು ರಾಮಾನುಜ ರಸ್ತೆ ,ಕೆ.ಆರ್ ಮೊಹಲ್ಲ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಸಾವನ್ನಪ್ಪಿದ್ದ ಯುವತಿಯರು.
ಶನಿವಾರ ಬೆಳಿಗ್ಗೆ ಖಾಸಗಿ ರೆಸಾರ್ಟ್ ಗೆ ಬಂದಿದ್ದ ಮೂವರು ಯುವತಿಯರು ರೂಮ್ ನಂ 2'ರಲ್ಲಿ ತಂಗಿದ್ದರು. ಇಂದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ರೆಸಾರ್ಟ್ ಮುಂಭಾಗದಲ್ಲಿನ ಈಜುಕೊಳಕ್ಕಿಳಿದು ನೀರಾಟವಾಡುತ್ತಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ. ಯುವತಿಯರು ಈಜುಕೊಳದ ದಂಡೆಯಲ್ಲಿ ಹೊರ ಉಡುಪುಗಳನ್ನು ಕಳಚಿಟ್ಟಿದ್ದು ಐ ಪೋನ್ ಒಂದನ್ನು ಈಜು ಕೊಳದ ನೀರಿಗೆ ಗುರಿಯಾಗಿ ರೆಕಾರ್ಡ್ ಇಟ್ಟು ನೀರಾಟ ಆಡಲು ಇಳಿದಿದ್ದರು.
ಯುವತಿಯರಿಗೆ ಈಜು ತಿಳಿಯದೆ ಇರುವುದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.ರೆಸಾರ್ಟ್ ಸಿಬ್ಬಂದಿಗಳು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಯುವತಿಯರು ನೀರಲ್ಲಿ ಮುಳುಗುತ್ತಿರುವ ಘಟನೆಯ ವೀಡಿಯೋ ಚಿತ್ರಣ ಸಿಸಿಟಿವಿಯಲ್ಲಿ ದಾಖಲಾಗಿದೆ.
ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್.ಎನ್. ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.