ಕೋಮು ಪ್ರಚೋದನೆ ಬರಹ: ಅರೋಪಿಯ ಬಂಧನ
Monday, December 9, 2024
ಬಂಟ್ವಾಳ: ಕೋಮುಪ್ರಚೋದನೆ, ಅವಹೇಳನಕಾರಿ ಬರಹ ಬರೆದು ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿರುವ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಟ್ವಳಾ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನವಗ್ರಾಮ ಸೈಟ್ ನಿವಾಸಿ ಜಯಪೂಜಾರಿ ಬಂಧಿತನಾಗಿದ್ದಾನೆ.
ಈತನ ಫೇಸ್‌ಬುಕ್ ಖಾತೆಯಲ್ಲಿ ಮಹಿಳೆಯರನ್ನು ತೇಜೋವಧೆ ಮಾಡುವ ಮತ್ತು ಧರ್ಮ, ಧರ್ಮಗಳ ಮಧ್ಯೆ ಕೋಮುಭಾವನೆ ಕೆರಳುವ ರೀತಿಯಲ್ಲಿ ಅವಹೇಳನಕಾರಿಯಾಗಿ ಬರಹ ಬರೆದು ಪೋಸ್ಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವಂತೆ ಮಾಡಿರುವುದರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೋಲೀಸರು ಸುಮೋಟೋ ಕೇಸ್ ದಾಖಲಿಸಿದ್ದರು.
ಇದೀಗ ಈತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.