ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರನ ರಥೋತ್ಸವ ಕೊಡಿಹಬ್ಬ: ಧ್ವಜಾರೋಹಣ-ಗರ್ನ ಕಟ್ಟುವುದು

ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರನ ರಥೋತ್ಸವ ಕೊಡಿಹಬ್ಬ: ಧ್ವಜಾರೋಹಣ-ಗರ್ನ ಕಟ್ಟುವುದು


ಕುಂದಾಪುರ: ಇದೇ ಡಿ.15 ರಂದು ಹುಣ್ಣಿಮೆಯಂದು ನಡೆಯಲಿರುವ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರನ ರಥೋತ್ಸವ ಕೊಡಿಹಬ್ಬದ ಪೂರ್ವಭಾವಿಯಾಗಿ ಸೋಮವಾರ ಬೆಳಿಗ್ಗೆ ದೇವಳದಲ್ಲಿ ಧ್ವಜ ಏರಿಸಲಾಯಿತು. ಇದಕ್ಕೆ ಗರುಡ ಧ್ವಜ ಕಟ್ಟುವುದು ಎನ್ನುವರು.

ಇಲ್ಲಿನ ಪ್ರಾದೇಶಿಕ ಭಾಷೆಯಲ್ಲಿ 'ಗರ್ನ ಕಟ್ಟುವುದು' ಎಂದೇ ಪ್ರಸಿದ್ಧ.

ಹಬ್ಬದ ಏಳು ದಿನಗಳ ಮೊದಲು ಅಂದರೆ ಹುಣ್ಣಿಮೆಯ ಹಿಂದಿನ ನವಮಿಯಂದು ಗರ್ನ ಕಟ್ಟಲಾಗುತ್ತದೆ. ದೇವಾಲದೆದುರಿನ ಸುಮಾರು 80 ಅಡಿ ಎತ್ತರದ ಧ್ವಜ ಸ್ತ0ಭಕ್ಕೆ ಕೋಟಿಲಿಂಗೇಶ್ವರನ ವಾಹನವಾದ ನಂದಿ, ಸೂರ್ಯನ ಚಿತ್ರವುಳ್ಳ ಶ್ವೇತ ಬಾವುಟವನ್ನು ಕಟ್ಟಲಾಗುತ್ತದೆ. ಕಟ್ಟುವ ಮೊದಲು ವಿಧ್ಯುಕ್ತ ಪೂಜೆ ನೆರವೇರಿಸಿ, ಸುತ್ತು ಬಂದು ನಂತರ ಪ್ರಸಾದದೊಂದಿಗೆ ಧ್ವಜಕ್ಕೆ ಹಗ್ಗ ಬಿಗಿದು, ತಳಿರು ತೋರಣಗಳಿಂದ ಸಿಂಗಾರಗೊಂಡ ಧ್ವಜದ ಕಂಬಕ್ಕೆ ಕಟ್ಟಿ ಮೇಲೆ ಏರಿಸಲಾಗುತ್ತದೆ. ಈ ವೇಳೆ ವಾದ್ಯ ಗಂಟೆ ನಿನಾದದೊಂದಿಗೆ ಭಕ್ತರ ಜಯಘೋಷಗಳೂ ಮೊಳಗುತ್ತವೆ.

ಪ್ರಾಚೀನ ಕಾಲದ ಆಚರಣೆಯಂತೆ ಇದರ ಅರ್ಥ, ಎತ್ತರದಲ್ಲಿ ಧ್ವಜ ಹಾರಾಡಿಸುವುದೆಂದರೆ, ಅಲ್ಲಿನ ದೇವಾಲಯದಲ್ಲಿ ಹಬ್ಬ ನಡೆಯಲಿದೆ ಎಂದು ಸುತ್ತಲ ಊರಿನವರಿಗೆ ಪ್ರಚುರಪಡಿಸುವುದು. ಸಂಪರ್ಕ ಮಾಧ್ಯಮಗಳು ಇಲ್ಲದ ಹಿಂದಿನ ಕಾಲದಲ್ಲಿ ಈ ಧ್ವಜವೇ ಹಬ್ಬದ ಬಗ್ಗೆ ಸಾರುತ್ತಿತ್ತು.

ಈ ಧ್ವಜ ಏರಿಸಿದ ನಂತರ ಊರಿನವರು  ಸಾಮಾನ್ಯವಾಗಿ ಪರಸ್ಥಳಕ್ಕೆ ಹೋಗುವುದಿಲ್ಲ. ಪರಸ್ಥಳದಿಂದ ಬಂದವರು ಹಬ್ಬ ಮುಗಿಯದೆ ಹಿಂದಿರುಗುವುದಿಲ್ಲ. ಹದಿನಾಲ್ಕು ಗ್ರಾಮಗಳ ವಿಶಾಲ ವ್ಯಾಪ್ತಿ ಹೊಂದಿರುವ ಕೋಟೇಶ್ವರದ ಕೊಡಿಹಬ್ಬ ಕರಾವಳಿಯಲ್ಲದೆ ಸಮೀಪದ ಮಲೆನಾಡು, ಅರೆಮಲೆನಾಡು ಪ್ರದೇಶಗಳಲ್ಲೂ ಹೆಸರುವಾಸಿ. ಹೀಗೆ ದೂರದ ಊರುಗಳಿಂದಲೂ ಜನರು ಹಬ್ಬಕ್ಕಾಗಿ ಇಲ್ಲಿಗೆ ಬರುವಾಗ ಸ್ಥಳವಂದಿಗರು ಊರಲ್ಲಿಯೇ ಇದ್ದು, ಅವರ ಆದರೋಪಚಾರದ ಕಡೆ ನಿಗಾ ವಹಿಸಬೇಕು ಎಂಬುದೇ ಈ ಆಚರಣೆಯ ಹಿಂದಿರುವ ಉದ್ದೇಶ.

ಗರ್ನ ಕಟ್ಟಿದ ದಿನದಿಂದ ದೇವಾಲಯದಲ್ಲಿ ಮಧ್ಯಾನ್ಹ ಶ್ರೀ ಕೋಟಿಲಿಂಗೇಶ್ವರನಿಗೆ ಶತರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳು ಸಲ್ಲುತ್ತವೆ. ರಾತ್ರಿ  ಹೊರಸುತ್ತಿನ ಬಲಿಕಲ್ಲುಗಳಿಗೆ ಬಲಿ ಸಮರ್ಪಿಸುವ 'ಬೈನ್ ಬಲಿ' ಎಂಬ ಕಾರ್ಯಕ್ರಮವಿರುತ್ತದೆ. ನುಕ್ಕಿ ಸೊಪ್ಪು-ಅಕ್ಕಿ ಮಿಶ್ರಣವನ್ನು ಬಲಿ ಕಲ್ಲುಗಳಿಗೆ ಸಮರ್ಪಿಸಲಾಗುತ್ತದೆ. ನಂತರ ಪ್ರತಿದಿನವೂ ರಾತ್ರಿ ದೇವರ ವಿವಿಧ ವಾಹನೋತ್ಸವಗಳ ಪುರಮೆರವಣಿಗೆ ನಡೆಯುತ್ತದೆ. ಅವಿಭಜಿತ ದ.ಕ. ಜಿಲ್ಲೆಯ ಹಬ್ಬದ ಋತುವಿನ ಮೊದಲ ಹಬ್ಬ  ಕೊಡಿಹಬ್ಬವು "ಭುವನೋತ್ಸವ" ಎಂದೇ ಪುರಾಣದಲ್ಲಿ ಉಲ್ಲೇಖಿತವಾಗಿದೆ.

ಸೋಮವಾರ ಬೆಳಿಗ್ಗೆ ಗರ್ನ ಕಟ್ಟುವ ಧಾರ್ಮಿಕ ವಿಧಿಗಳನ್ನು ತಂತ್ರಿ ವೇದಮೂರ್ತಿ ಪ್ರಸನ್ನಕುಮಾರ ಐತಾಳರು ಮತ್ತು ಅರ್ಚಕ ವೃಂದದವರು ನೆರವೇರಿಸಿದರು. ಈ ವೇಳೆ ದೇವಳ ಆಡಳಿತಧಿಕಾರಿ, ಕುಂದಾಪುರದ ತಹಶೀಲ್ದಾರ್ ಶೋಭಲಕ್ಷ್ಮಿ, ಕಾರ್ಯನಿರ್ವಾಹ ಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷರುಗಳಾದ ಗೋಪಾಲಕೃಷ್ಣ ಶೆಟ್ಟಿ ಪ್ರಭಾಕರ ಶೆಟ್ಟಿ, ಸದಸ್ಯರಾದ ಸುರೇಶ್ ಶೇರಿಗಾರ್, ಚಂದ್ರಿಕಾ ಧನ್ಯ, ಶಾರದಾ, ಭಾರತಿ, ಮಂಜುನಾಥ ಆಚಾರ್ಯ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಜಿ ಎಸ್ ಬಿ ಸಮುದಾಯದ ಪ್ರಮುಖರು, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಇನ್ನಿತರರು ಹಾಗೂ ಸ್ಥಳವಂದಿಗ ಗಣ್ಯರು ಉಪಸ್ಥಿತರಿದ್ದರು. ರಾತ್ರಿ ಶ್ರೀ ಕೋಟಿಲಿಂಗೇಶ್ವರ ದೇವರ ಮಯೂರ ವಾಹನೋತ್ಸವ ನಡೆಯಿತು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article