‘ಬಾಂಗ್ಲಾದ ದೂತಾವಾಸದ ಎದುರು ಬಿಜೆಪಿ ಪ್ರತಿಭಟಿಸಲಿ’: ರಮಾನಾಥ ರೈ

‘ಬಾಂಗ್ಲಾದ ದೂತಾವಾಸದ ಎದುರು ಬಿಜೆಪಿ ಪ್ರತಿಭಟಿಸಲಿ’: ರಮಾನಾಥ ರೈ


ಮಂಗಳೂರು: ಯಾವುದೇ ದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಹಿತ ಕಾಯುವುದು ಆ ದೇಶದ ಆಡಳಿತ ಚುಕ್ಕಾಣಿ ಹಿಡಿದವರ ಕರ್ತವ್ಯ. ಬಾಂಗ್ಲಾ ಆಗಿರಲಿ, ಶ್ರೀಲಂಕವಾಗಲಿ ಅಥವಾ ನೆರೆಯ ಪಾಕಿಸ್ತಾನವಾಗಲಿ ಅಲ್ಲಿನ ಸರಕಾರ ರಾಜಧರ್ಮ ಹೊಣೆಗಾರಿಕೆಲ್ಲಿ ವಿಫಲ ಆದಾಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅದನ್ನು ಪ್ರಶ್ನಿಸಿ ಪ್ರತಿಭಟಿಸಬೇಕು. ಅದು ಬಿಟ್ಟು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಖಂಡನೀಯ ಕೃತ್ಯದ ವಿರುದ್ಧ ಮಂಗಳೂರಿನ ರಸ್ತೆ ಬಂದ್ ಮಾಡಿ ಪ್ರತಿಭಟಿಸುವುದು ಸಮಂಜಸವಲ್ಲ. ಬಾಂಗ್ಲಾದ ದೂತಾವಾಸದ ಎದುರು ಬಿಜೆಪಿ ಪ್ರತಿಭಟಿಸಲಿ ಎಂದು  ಕೆಪಿಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ ನಾಯಕ ಬಿ. ರಮಾನಾಥ ರೈ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮತೀಯ ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ರಸ್ತೆಬಂದ್ ಮಾಡಿ ಪ್ರತಿಭಟಿಸುವ ಮೂಲಕ ಬಿಜೆಪಿ ದ್ವೇಷ ಬಿತ್ತುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು. 

ಯಾವುದೇ ರಾಷ್ಟ್ರದಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ದಾಳಿ ಖಂಡನೀಯವಾಗಿದ್ದು, ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನೂ ವಿರೋಧಿಸಬೇಕಾಗಿದೆ. ಆದರೆ ಅದಕ್ಕಾಗಿ ಬಿಜೆಪಿ ಮಂಗಳೂರಿನಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸುವ ಬದಲು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕೇಂದ್ರ ಸರಕಾರ ಪ್ರತಿಭಟಿಸುವಂತೆ ಒತ್ತಡ ಹೇರುವ ಕಾರ್ಯ ಮಾಡಲಿ ಎಂದರು.

ಮಂಗಳೂರು ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದೆ ಎಫ್‌ಐಆರ್ ದಾಖಲಿಸಿರುವ ಕುರಿತಂತೆ ಎಡಪಕ್ಷಗಳ ಅಭಿಯಾಯನದ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಇಲಾಖೆ ಒಂದು ಕಡೆ ಪ್ರತಿಭಟನೆಗೆ ಅವಕಾಶ ನೀಡಿ, ಇನ್ನೊಂದು ಕಡೆ ಅವಕಾಶ ನೀಡದಿರುವುದು ಸರಿಯಲ್ಲ. ನಗರದಲ್ಲಿ ರಸ್ತೆ ಬಂದ್ ಮಾಡಿ ಆಹಾರ ಮೇಳ ನಡೆಸುವುದು ಕೂಡಾ ತಪ್ಪು. ಈ ಬಗ್ಗೆ ಸಂದರ್ಭ ಬಂದಾಗ ಮುಖ್ಯಮಂತ್ರಿ ಸೇರಿದಂತೆ ಪ್ರಮುಖರ ಜತೆ ಚರ್ಚಿಸುವುದಾಗಿ ಹೇಳಿದರು. 

ಪೊಲೀಸ್ ಆಯುಕ್ತರ ವರ್ಗಾವಣೆ ಒತ್ತಡ ಕುರಿತ ಪ್ರಶ್ನೆಗೆ, ವರ್ಗಾವಣೆ ಪ್ರಕ್ರಿಯೆ ಸರಕಾರ ನಡೆಸುವಂತದ್ದು. ಅದಕ್ಕೆ ಮೂಗು ತೂರಿಸುವ ಕೆಲಸ ನಾವು ಮಾಡುವುದಿಲ್ಲ ಎಂದರು. 

ಕಾಂಗ್ರೆಸ್ ಕಚೇರಿಯಲ್ಲಿ ಇತ್ತೀಚೆಗೆ ನಾಯಕರ ನಡುವಿನ ಹೊಡೆದಾಟದ ಕುರಿತಂತೆ ಪ್ರತಿಕ್ರಿಯಿಸಿದ ಅವರು, 45 ವರ್ಷದ ರಾಜಕೀಯ ಜೀವನದ ಅನುಭವ ಇದೆ. 9 ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದೇನೆ. ಇಂತಹ ಸಣ್ಣ ಪುಟ್ಟ ಘಟನೆಗಳು ಸಾಮಾನ್ಯ. ಕಪಾಳ ಮೋಕ್ಷ ಆದ ಬಗ್ಗೆ ನನಗೆ ಅರಿವಿಲ್ಲ. ನಾನು ಸ್ಥಳದಲ್ಲಿ ಇರಲಿಲ್ಲ ಎಂದರು.

ಶಶಿಧರ ಹೆಗ್ಡೆ, ನವೀನ್ ಡಿಸೋಜಾ, ಪ್ರಥ್ವಿರಾಜ್, ಅಬ್ಬಾಸ್ ಅಲಿ, ಡಿ.ಕೆ. ಅಶೋಕ್, ಸುಹಾನ್ ಆಳ್ವ, ಕೆ.ಎಲ್. ಪದ್ಮನಾಭ, ದುರ್ಗದಾಸ್ ಮೊದಲಾದವರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article