ಎಂಸಿಸಿ ಅಧ್ಯಕ್ಷ ಅನಿಲ್ ಲೋಬೊ ಅವರನ್ನು ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ಶಿಫಾರಸು
ಮಂಗಳೂರು: ನಗರದ ಎಂಸಿಸಿ ಬ್ಯಾಂಕ್‌ನಿಂದ ಸಾಲ ಪಡೆದ ಮನೋಹರ್ ಪಿರೇರ ಎಂಬವರ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಆರೋಗ್ಯದಲ್ಲಿ ವ್ಯತ್ಯಯವಾದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ಶಿಫಾರಸು ಮಾಡಿದೆ.
ಮನೋಹರ್ 10 ವರ್ಷಗಳ ಹಿಂದೆ ಎಂಸಿಸಿ ಬ್ಯಾಂಕ್‌ನಿಂದ ಸಾಲ ಪಡೆದು, ಅದರಿಂದ ಮನೆ ಖರೀದಿಸಿ ವಾಸಿಸುತ್ತಿದ್ದರು. ಸಾಲ ಮರುಪಾವತಿಸದ ಕಾರಣಕ್ಕಾಗಿ ಎರಡು ವರ್ಷಗಳ ಹಿಂದೆ ಅವರ ಮನೆಯನ್ನು ಬ್ಯಾಂಕ್ ಜಪ್ತಿ ಮಾಡಿತ್ತು. ಮನೆ ಜಫ್ತಿಯಿಂದ ಮನೋಹರ್ ಪಿರೇರ ತೀವ್ರ ಮಾನಸಿಕ ಸಮಸ್ಯೆ ಅನುಭವಿಸಿದ್ದು, ಎರಡು ಬಾರಿ ಹೃದಯಾಘಾತಕ್ಕೊಳಗಾಗಿದ್ದರು. ಇದೇ ಕಾರಣದಿಂದ ಮನನೊಂದು ಮನೋಹರ್ ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಮೇಲೆ ಆರೋಪ ಹೊರಿಸಿ ಆಡಿಯೋವೊಂದನ್ನು ಹರಿಯಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬುಧವಾರ ಅನಿಲ್ ಲೋಬೋನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಗುರುವಾರ ಅನಿಲ್ ಲೋಬೋ ಆರೋಗ್ಯದಲ್ಲಿ ಸಮಸ್ಯೆಯಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ.