ಸುವಾಸನೆಯ ಸುಪಾರಿ ಉತ್ಪನ್ನದ ಮೇಲಿನ ನಿಷೇಧ ತೆರವುಗೊಳಿಸುವಂತೆ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಮನವಿ
ಮಂಗಳೂರು: ಸುವಾಸನೆಯ ಸುಪಾರಿ ಉತ್ಪನ್ನದ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಮನವಿ ಮಾಡಿದ್ದಾರೆ.
2013 ರಿಂದ ಮಹಾರಾಷ್ಟ್ರದಲ್ಲಿ ಸುವಾಸನೆಯ ಸುಪಾರಿ ಉತ್ಪನ್ನಗಳ ಮೇಲೆ ವಾರ್ಷಿಕ ನಿಷೇಧ ಹೇರಲಾಗಿದ್ದು, ದೀರ್ಘಕಾಲದ ಈ ಸಮಸ್ಯೆಯನ್ನು ಪರಿಹರಿಸಲು ಒತ್ತಾಯಿಸಲಾಗಿದೆ. ಈ ನಿಷೇಧದಿಂದ ರೈತರು, ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಅನಗತ್ಯ ತೊಂದರೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ವಿಶದ ಪಡಿಸಲಾಗಿದೆ.
ಕ್ಯಾಂಪ್ಕೋದ ಸುವಾಸನೆಯ ಸುಪಾರಿ ಉತ್ಪನ್ನಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯನ್ನು ಸಂಪೂರ್ಣವಾಗಿ ಅನುಸರಿಸುತ್ತವೆ. ತಂಬಾಕು, ಗುಟ್ಕಾ ಅಥವಾ ಪಾನ್ ಮಸಾಲಾಗಳಂತಹ ಹಾನಿಕಾರಕ ಉತ್ಪನ್ನಗಳಿಂದ ಭಿನ್ನವಾಗಿವೆ. ಈ ಉತ್ಪನ್ನಗಳು ಎಲ್ಲ ನಿಯಂತ್ರಕ ಮಾನದಂಡಗಳಿಗೆ ಬದ್ಧವಾಗಿವೆ ಮತ್ತು ಕಾನೂನುಬದ್ಧವಾಗಿ ತಯಾರಿಸಲ್ಪಟ್ಟಿವೆ.
ಈ ಉತ್ಪನ್ನಗಳು ಭಾರತದ ಉಳಿದ ಭಾಗಗಳಲ್ಲಿ ಮಾರಾಟವಾಗುತ್ತಿವೆ ಎಂದಿದ್ದಾರೆ. ಅಲ್ಲದೆ ಸುವಾಸನೆಯ ಸುಪಾರಿ ಮತ್ತು ಪಾನ್ ಮಾಸಾಲಾದ ನಡುವಿನ ಪ್ರಮುಖ ವ್ಯತ್ಯಾಸಗಳನ್ನೂ ಸಿಎಂ ಫಡ್ನವಿಸ್ಗೆ ಮನವರಿಕೆ ಮಾಡಿದ್ದಾರೆ.
ಭಾರತದಲ್ಲಿ ಅಡಕೆ ಅಗಾಧವಾದ ಸಾಂಸ್ಕೃತಿಕ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ 3,000 ಹೆಕ್ಟೇರ್ಗಿಂತಲೂ ಹೆಚ್ಚು ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತದೆ. ವಾರ್ಷಿಕವಾಗಿ ಸುಮಾರು 5,000 ಮೆಟ್ರಿಕ್ ಟನ್ ಅಡಕೆ ಉತ್ಪಾದಿಸುತ್ತದೆ. ಸುವಾಸನೆಯ ಸುಪಾರಿಯ ಮೇಲಿನ ನಿಷೇಧವು ಈ ರೈತರ ಜೀವನೋ ಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ರ ಅಡಿಯಲ್ಲಿ ರೂಪಿಸಲಾದ ನಿಯಮಗಳಿಗೆ ಬದ್ಧವಾಗಿಯೇ ನಡೆಯುತ್ತಿದೆ ಎಂದು ತಿಳಿಸಲಾಗಿದೆ.
ಮಹಾರಾಷ್ಟ್ರದ ಅಡಿಕೆ ರೈತರು ಮತ್ತು ವ್ಯವಹಾರಗಳಿಗೆ ನ್ಯಾಯ ಒದಗಿಸಲು ಸುವಾಸನೆಯ ಸುಪಾರಿ ಮೇಲಿನ ನಿಷೇಧವನ್ನು ತೆಗೆದುಹಾಕಲು ಕ್ಯಾಂಪ್ಕೋ ಸಂಸ್ಥೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.