ಕಮೀಷನರ್ ವರ್ಗಾವಣೆ ಆಗ್ರಹಿಸಿ ಕಾವೂರಿನಲ್ಲಿ ಪ್ರತಿಭಟನೆ
ಮಂಗಳೂರು: ಜನಪರ ಹೋರಾಟಗಳಿಗೆ ಅವಕಾಶ ನಿರಾಕರಣೆ, ಪ್ರತಿಭಟನಾಕಾರರ ಮೇಲೆ ಕೇಸು ದಾಖಲಿಸುವ ಸರ್ವಾಧಿಕಾರಿ ಪ್ರವೃತ್ತಿಯ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್‌ರನ್ನು ವರ್ಗಾಯಿಸಬೇಕೆಂದು ಒತ್ತಾಯಿಸಿ ಕಾವೂರು ಜಂಕ್ಷಣ್‌ನಲ್ಲಿ ಸಮಾನ ಮನಸ್ಕ ಸಂಘಟನೆಗಳ ವೇದಿಕೆಯಿಂದ ಪ್ರತಿಭಟನಾ ಪ್ರದರ್ಶನ ನಡೆಯಿತು.
ಸಭೆಯನ್ನು ಉದ್ದೇಶಿಸಿ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮಾಜಿ ಉಪಮೇಯರ್ ಕೆ. ಮಹಮ್ಮದ್ ಮಾತನಾಡಿ, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರಿಗೆ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಹೋರಾಡುವವರ ಬಗ್ಗೆ ಅಲರ್ಜಿ ಇದೆ, ಒಬ್ಬ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗೆ ಇಂತಹ ಮನಸ್ಥಿತಿ ಸರಿಯಲ್ಲ, ಜನಪರ ಹೋರಾಟಗಳಿಗೆ ಕಡಿವಾಣ ಹಾಕುವ ಹೊಸ ಸಂಪ್ರದಾಯ ಪೊಲೀಸ್ ಇಲಾಖೆ ಸೃಷ್ಟಿಸುತ್ತಿರುವುದು ಖಂಡನೀಯ ಕಮೀಷನರ್ ವರ್ಗಾವಣೆ ಆಗುವವರೆಗೆ ಸಮಾನ ಮನಸ್ಕ ಹೋರಾಟಗಾರರು ನಿರಂತರ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.
ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಮಾತನಾಡಿ, ಬಂಡವಾಳಶಾಹಿ ಆಡಳಿತ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚಳವಾಗುತ್ತಿವೆ. ಇವುಗಳ ಪರಿಹಾರಕ್ಕೆ ಹೋರಾಟವಲ್ಲದೆ ಬೇರೆ ದಾರಿಯಿಲ್ಲ. ಪೊಲೀಸ್ ಆಯುಕ್ತರು ಇಂತಹ ಅನಿವಾರ್ಯ ಹೋರಾಟಗಳಿಗೆ ಕಡಿವಾಣ ಹಾಕಲು ಹೊರಟಿರಿವುದು ಸಂವಿಧಾನ ಬದ್ಧ ಹಕ್ಕನ್ನು ಕಿತ್ತುಕೊಂಡಂತೆ. ಆಯುಕ್ತರ ಗೊಡ್ಡು ಬೆದರಿಕೆಗಳಿಗೆ ನಾವು ಹಿಂಜರಿಯುವುದಿಲ್ಲ. ಜೈಲಿಗೆ ಹೋದರೂ ಸರಿ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಸಿಪಿಐಎಂ ಜಿಲ್ಲಾ ಮುಖಂಡ ಸುನೀಲ್ ಕುಮಾರ್ ಬಜಾಲ್, ಡಿವೈಎಫ್‌ಐ ಮುಖಂಡರಾದ ನವೀನ್ ಕೊಂಚಾಡಿ, ಸಾಮಾಜಿಕ ಮುಂದಾಳು ರಿಯಾಝ್ ಹುಸೈನ್ ಮಾತನಾಡಿದರು.
ಹೋರಾಟದ ನೇತೃತ್ವವನ್ನು ಅನಿಲ್ ಡಿಸೋಜ, ನೌಶಾದ್, ರೆಹೆಮಾನ್ ಕುಂಜತ್ತಬೈಲ್, ಮುಸ್ತಾಫ, ಪ್ರಮೀಳಾ, ಆಶಾ ಗಣೇಶ್, ಚರಣ್ ಶೆಟ್ಟಿ, ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.





