ಸುವರ್ಣ ಸೌಧದಲ್ಲಿ ಸಿ.ಟಿ. ರವಿ ಮೇಲೆ ಹಲ್ಲೆ ದಕ್ಷಿಣ ಕನ್ನಡ ಬಿಜೆಪಿ ಖಂಡನೆ: ಸತೀಶ್ ಕುಂಪಲ
ಮಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚೆನ್ನರಾಜ ಮತ್ತು ಆಪ್ತ ಸಹಾಯಕ ಸದ್ದಾಂ ಮತ್ತು ಸಂಗಡಿಗರು ಹಲ್ಲೆ ಮಾಡುವುದರ ಮೂಲಕ ತಮ್ಮ ಗೂಂಡಾ ಪ್ರವೃತ್ತಿಯನ್ನು ರಾಜ್ಯದ ಶಕ್ತಿ ಕೇಂದ್ರವಾದ ಸುವರ್ಣ ಸೌಧದ ಒಳಗೂ ಆರಂಭಿಸಿ ಅತೀ ಕೆಟ್ಟ ಘಟನೆಗೆ ಕಾರಣರಾಗಿದ್ದಾರೆ.
ಭ್ರಷ್ಟಾಚಾರ ಮಾಡಿದರೂ ಮೊಂಡುತನ ತೋರುವ ಸಿದ್ದರಾಮಯ್ಯನ ನಡವಳಿಕೆ ಕಾಂಗ್ರೆಸಿಗರ ಭಂಡತನಕ್ಕೆ ದಾರಿ ಮಾಡಿದಂತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ವಿಧಾನ ಪರಿಷತ್ನ ಸದಸ್ಯ ಕಿಶೋರ್ ಕುಮಾರ್ ಅವರ ಮೇಲೂ ಹಲ್ಲೆ ನಡೆಸಿರುವುದನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.
ಸುವರ್ಣ ಸೌಧದಲ್ಲಿ ಆಗಿರುವ ಭದ್ರತಾ ವೈಪಲ್ಯಕ್ಕೆ ಮತ್ತು ಆಗಿರುವ ಘಟನೆಗೆ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಮತ್ತು ಹಲ್ಲೆಕೋರರಿಗೆ ಶಿಕ್ಷೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳಿಗೆ ರಾಜ್ಯದ ಶಕ್ತಿಕೇಂದ್ರದಲ್ಲೇ ರಕ್ಷಣೆ ಇಲ್ಲದಿರುವುದು ಅತ್ಯಂತ ಕಳವಳಕಾರಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಕೇವಲ ಈ ರೀತಿಯ ಘಟನೆಗಳಿಂದ ರಾಜ್ಯ ಸುದ್ದಿಯಾಗುತ್ತಿರುವುದು ಬಹಳ ಖೇದಕರ. ಉತ್ತರ ಕರ್ಣಾಟಕದ ಜನತೆಯ ಬೇಡಿಕೆ ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕಿದ್ದ ಸುವರ್ಣ ಸೌಧ ಗೂಂಡತನಕ್ಕೆ ಸಾಕ್ಷಿಯಾಗಿರುವುದು ನಾಚಿಕೆಗೇಡು. ಜತೆಯಲ್ಲಿ ಸಾರ್ವಜನಿಕರಿಗೆ ಕಾಂಗ್ರೆಸಿಗರಿಂದ ಆಗುತ್ತಿರುವ ಅನ್ಯಾಯದ ಪಾಡು ಕೇಳಂದತಾಗಿದೆ ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.