ಲಕ್ಷ್ಮೀ ವೆಂಕಟೇಶ ದೇವರಿಗೆ ಸೇರಿದ ಆಸ್ತಿಯನ್ನು ಖಾಸಗಿಯವರು ಫೋರ್ಜರಿ ದಾಖಲೆ ಸೃಷ್ಟಿಸಿ ಸ್ವಾಧೀನಪಡಿಸಿಕೊಂಡಿದ್ದಾರೆ: ಪಡುಬಿದ್ರಿ ದಾಮೋದರ ಶೆಣೈ ಆರೋಪ
ಮಂಗಳೂರು: ನಗರದ ಬಂದರಿನ ಕಸಬಾ ಬಜಾರ್ ಶ್ರೀ ಮಹಾಲಸಾ ಮಾರಾಯಣೀ ಲಕ್ಷ್ಮೀ ವೆಂಕಟೇಶ ದೇವರಿಗೆ ಸೇರಿದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ಫೋರ್ಜರಿ ದಾಖಲೆ ಸೃಷ್ಟಿಸಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಪಡುಬಿದ್ರಿ ದಾಮೋದರ ಶೆಣೈ ಆರೋಪಿಸಿದರು.
ಮೂಲಗೇಣಿ ಆಸ್ತಿ ಲೀಸಿಗೆ ಪಡೆದ ಭೂಮಿಯನ್ನು ಯಾರೂ ತಮ್ಮ ಸ್ವಂತಕ್ಕೆ ಮಾಡಲು ಅವಕಾಶ ಇರುವುದಿಲ್ಲ. ಶಾಶ್ವತ ರೂಪದಲ್ಲಿ ನೀಡಲ್ಪಡುವ ಗುತ್ತಿಗೆ ಎಂದಾಗಿರುತ್ತದೆ. ಆದರೆ, ನಗರದ ಹೃದಯಭಾಗದಲ್ಲಿರುವ ಕೋಟಿಗಟ್ಟಲೆ ಬೆಲೆಬಾಳುವ ಸರ್ವೆ ನಂಬರ್ 1448-439/11-8 ಮತ್ತು 1449-440/11-8ರ ಎಂಟು ಸೆಂಟ್ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆಪಾದಿಸಿದರು.
ಈ ಭೂಮಿಯನ್ನು 1912ರಲ್ಲಿ ಮಾರೂರು ಗಣಪತಿ ಅನಂತ ಪೈ ಅವರು ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ಶ್ರೀ ಮಹಾಲಸಾ ನಾರಾಯಣೀ ಲಕ್ಷ್ಮೀ ವೆಂಕಟೇಶ ದೇವರ ಭಂಡಾರಕ್ಕೆ ಶಾಶ್ವತ ಲೀಸಿಗೆ ಕೊಡಲಾಗಿತ್ತು. ಗಣಪತಿ ಪೈ ಅವರ ಕಾಲಾನಂತರ ಹಿರಿಯ ಮಗ ರಾಮದಾಸ ಪೈ ಅವರಿಗೆ ಭೂಮಿ ಸ್ವಾಧೀನಕ್ಕೆ ಬಂದಿತ್ತು. ಅನಂತರ, ಅವರ ಪತ್ರ ಮಾರೂರ್ ಗಣಪತಿ ಪೈ(2) ಅವರಿಗೆ ಹಕ್ಕು ಬಂದಿತ್ತು. ಆದರೆ ಗಣಪತಿ ಪೈ (2) ಅವರ ಬಳಿಕೆ ಪತ್ನಿ ಗೀತಾ ಪೈ ಅಥವಾ ಮಕ್ಕಳಿಗೆ ನೀಡಲ್ಪಡುವ ಬದಲು ಅದನ್ನು ಮಂಗಳೂರಿನ ಹಿರಿಯ ವಕೀಲರೊಬ್ಬರು ಮತ್ತು ಕುಟುಂಬಕ್ಕೆ ಸೇರದ ಕೆಲವು ವ್ಯಕ್ತಿಗಳು ಸೇರಿಕೊಂಡು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು ಹೇಳಿದರು.
ಇದರಲ್ಲಿ ಕೋಟ್ಯಂತರ ರೂಪಾಯಿ ಕೈ ಬದಲಾಗಿದ್ದು, ಪೋರ್ಜರಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ದೇವರಿಗೆ ಸೇರಿದ ಆಸ್ತಿಯನ್ನು ವಕೀಲರ ನೇತೃತ್ವದಲ್ಲಿ ಸ್ವಂತಕ್ಕೆ ಮಾಡಿಕೊಂಡಿದ್ದಾರೆ. ಈ ಜಾಗದ ಆರ್‌ಟಿಸಿ ದಾಖಲೆಯನ್ನು ಭೂಮಿ ತಂತ್ರಾಂಶದಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಶ್ರೀ ಮಹಾಲಸಾ ನಾರಾಯಣೀ ಲಕ್ಷ್ಮೀ ವೆಂಕಟೇಶ ದೇವರಿಗೆ ಸೇರಿದ ಎಂಬುದಾಗಿದ್ದ ಉಲ್ಲೇಖವನ್ನು ತೆಗೆದು ಹಾಕಿರುವುದು ಪತ್ತೆಯಾಗಿದೆ. ಆ ಜಾಗದಲ್ಲಿ ಕಮಲಾ ಪಡಿಯಾರ್, ವಿಮಲಾ ಶೆಣೈ, ಮಂಗಲ್ಪಾಡಿ ಸಂಧ್ಯಾ ಶೆಣೈ ಮತ್ತು ಮಂಗಲ್ಪಾಡಿ ವರದರಾಯ ಶೆಣೈ ಎಂಬವರ ಹೆಸರನ್ನು ಆಕ್ರಮವಾಗಿ ಸೇರ್ಪಡೆ ಮಾಡಲಾಗಿದೆ. ಇದೇ ದಾಖಲೆಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದರು.
ದೇವರ ಹೆಸರಿನಲ್ಲಿ ಸೇರಿದ ಆಸ್ತಿಯನ್ನು ಖಾಸಗಿಯವರು ಅಕ್ರಮವಾಗಿ ಪರಭಾರೆ ಮಾಡಿಕೊಂಡಿರುವ ಬಗ್ಗೆ ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಉಪ ಲೋಕಾಯುಕ್ತ ನ್ಯಾ. ವೀರಪ್ಪ ಅವರಿಗೆ ದೂರು ನೀಡಿದ್ದು, ಪೊಲೀಸರಿಗೆ ದೂರು ನೀಡಲು ಸೂಚಿಸಿದ್ದರು. ಅದರಂತೆ. ಡಿ.1ರಂದು ಬಂದರು ಠಾಣೆಗೆ ದಾಖಲೆ ಸಹಿತ ದೂರು ನೀಡಿದ್ದರೂ, ಆರೋಪಿತರ ವಿರುದ್ಧ ಇದುವರೆಗೆ ಎಫ್‌ಐಆರ್ ದಾಖಲು ಮಾಡಿಲ್ಲ. ದೇವರ ಆಸ್ತಿಯನ್ನು ನುಂಗಿ ಹಾಕಿದವರ ಮೇಲೆ ಕ್ರಮ ಜರುಗಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಮಾರೂರು ಗಣಪತಿ ಪೈ (2) ಅವರ ಪತ್ನಿ ಗೀತಾ ಜಿ. ಪೈ ಅವರು ಇಳಿ ವಯಸ್ಸಿನಲ್ಲಿದ್ದು (72 ವರ್ಷ) ಬೆಂಗಳೂರಿನಲ್ಲಿ ವಾಸವಿದ್ದಾರೆ. ಈ ಜಾಗದ ಬಗ್ಗೆ ದಾವೆ ಹೂಡುವುದು ಸೇರಿದಂತೆ ಸಂಬಂಧಪಟ್ಟ ವ್ಯವಹಾರ ನೋಡಿಕೊಳ್ಳಲು ನನಗೆ ಪವರ್ ಆಫ್ ಆಟಾರ್ನಿ ನೀಡಿದ್ದಾರೆ. ಹಾಗಾಗಿ, ಪೊಲೀಸರಿಗೆ ದೂರು ನೀಡಿದ್ದು, ಪೋರ್ಜರಿ ದಾಖಲೆ ಸೃಷ್ಟಿಸಿ ದೇವರ ಆಸ್ತಿಯನ್ನು ಅಕ್ರಮವಾಗಿ ಸ್ವಂತಕ್ಕೆ ಮಾಡಿಕೊಂಡಿರುವ ಬಗ್ಗೆ ಕ್ರಮ ಜರುಗಿಸಲು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.